ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತೀಯರ ಪದಕ ಬೇಟೆ ಮುಂದುವರೆದಿದೆ.
ಹೈಜಂಪ್ ಟಿ63 ಸ್ಪರ್ಧೆಯಲ್ಲಿ ಭಾರತದ ಶದರ್ ಕುಮಾರ್ ಹಾಗೂ ಮರಿಯಪ್ಪನ್ ತಂಗವೇಲು ಪದಕಕ್ಕೆ ಕೊರಳೊಡ್ಡಿದ್ದಾರೆ. 1.88 ಮೀಟರ್ ಎತ್ತರ ಜಿಗಿತದೊಂದಿಗೆ ಶರದ್ ಕುಮಾರ್ ಬೆಳ್ಳಿ ಪದಕ ಗೆದ್ದರೆ, 1.85 ಮೀಟರ್ ಎತ್ತರ ಜಿಗಿಯುವ ಮೂಲಕ ಮರಿಯಪ್ಪನ್ ತಂಗವೇಲು ಕಂಚಿನ ಪದಕ ಗೆದ್ದಿದ್ದಾರೆ.
ಟಿ63 ವಿಭಾಗದಲ್ಲಿ ವಿಶ್ವ ದಾಖಲೆ ಹೊಂದಿರುವ ಅಮೆರಿಕದ ಎಜ್ರಾ ಫ್ರೆಚ್ ಅವರು 1.94 ಮೀಟರ್ ಎತ್ತರ ಜಿಗಿಯುವ ಮೂಲಕ ಪ್ಯಾರಾಲಿಂಪಿಕ್ಸ್ ನಲ್ಲಿ ಹೊಸ ದಾಖಲೆ ಬರೆದು ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. 2016 ರಲ್ಲಿ ರಿಯೊ ಡಿ ಜನೈರೊದಲ್ಲಿ ಚಿನ್ನ ಮತ್ತು ಟೋಕಿಯೊದಲ್ಲಿ ಬೆಳ್ಳಿ ಗೆದ್ದಿದ್ದ ಮರಿಯಪ್ಪನ್ ಈ ಬಾರಿ ಕೂಡ ಪದಕ ಗೆದ್ದಿದ್ದಾರೆ. ಈ ಮೂಲಕ ಪ್ಯಾರಾಲಿಂಪಿಕ್ಸ್ ನಲ್ಲಿ ಮೂರು ಪದಕ ಗೆದ್ದ ಸಾಧನೆ ಮಾಡಿದ್ದಾರೆ.
ಈ ಮೂಲಕ ಪದಕ ಪಟ್ಟಿಯಲ್ಲಿ ಭಾರತದ ಪದಕಗಳ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಇದು ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತೀಯರ ಶ್ರೇಷ್ಠ ಸಾಧನೆ ಎಂಬುವುದು ವಿಶೇಷ. 2020 ರಲ್ಲಿ ನಡೆದ ಟೋಕಿಯೋ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತದ 54 ಕ್ರೀಡಾಪಟುಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ 5 ಚಿನ್ನದ ಪದಕ, 8 ಬೆಳ್ಳಿ ಪದಕ ಮತ್ತು 6 ಕಂಚಿನ ಪದಕಗಳೊಂದಿಗೆ ಭಾರತೀಯರು ಒಟ್ಟು 19 ಪದಕಗಳನ್ನು ಗೆದ್ದ ಸಾಧನೆ ಮಾಡಿದ್ದರು. ಆದರೆ, ಈ ಬಾರಿ 20 ಪದಕಗಳನ್ನು ಗೆದ್ದ ಸಾಧನೆ ಮಾಡಿದೆ. ಇನ್ನೂ ಕ್ರೀಡೆಗಳು ಇರುವುದರಿಂದ ಇನ್ನೂ ಹೆಚ್ಚಿನ ಪದಕಗಳು ಭಾರತಕ್ಕೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.