ಭಾರತವನ್ನು ಇಂದು ಪಾಕಿಸ್ತಾನಿಗಳ ಆತ್ಮಾಹುತಿ ಡ್ರೋನ್ ದಾಳಿಯಿಂದ ಪಾರು ಮಾಡಿದ ಕೀರ್ತಿ ಎಸ್ 400 ಅಸ್ತ್ರಕ್ಕೆ ಸಲ್ಲಬೇಕು.
ಹೌದು, ಭಾರತದ ಗಡಿಯೊಳಗೆ ನುಗ್ಗಿ ಬಂದ ಪಾಕ್ ನ 50ಕ್ಕೂ ಹೆಚ್ಚು ಆತ್ಮಾಹುತಿ ಡ್ರೋನ್ ಗಳನ್ನು ಕ್ಷಣಾರ್ಧದಲ್ಲಿ ಸದೆ ಬಡೆದು ಸೈ ಎನ್ನಿಸಿಕೊಂಡ ಎಸ್ 400 ಅಸ್ತ್ರ ಉದಯಿಸಿದ ಕತೆಯೇ ರಣರೋಚಕ. ಅದು 1980ರ ಕಾಲಮಾನ. ರಷ್ಯಾ ಸೇನೆ ಬಲವರ್ಧನೆಗೆ ಭರ್ಜರಿ ತಾಲೀಮು ನಡೆದಿತ್ತು. ಆ ಹೊತ್ತಿಗಾಗಲೇ ರಷ್ಯಾ ಸೇನೆಯಲ್ಲಿ ಎಸ್ 200 ದೊಡ್ಡ ಶ್ರೇಯ ಗಳಿಸಿತ್ತು. ಈ ಎಸ್ 200 ಶತ್ರುಗಳ ವೈಮಾನಿಕ ದಾಳಿಯನ್ನು ಹಿಮ್ಮೆಟ್ಟಿಸುವ ತಾಕತ್ತು ಹೊಂದಿತ್ತು. ಸರಿಸುಮಾರು 200 ಕಿಲೋಮೀಟರ್ ದೂರದಲ್ಲೇ ಶತ್ರುಗಳ ಹೆಜ್ಜೆ ಗುರುತು ಪತ್ತೆ ಹಚ್ಚಿ ಬಾನಲ್ಲೇ ಉಡಾಯಿಸುವ ತಾಕತ್ತು ಹೊಂದಿತ್ತು.
ಆದರೆ, ರಷ್ಯಾ ಸೇನಾ ಸಂಶೋಧನಾ ಸಂಸ್ಥೆ ಈ ಅಸ್ತ್ರವನ್ನು ಉನ್ನತೀಕರಿಸಲು ನಿರ್ಧರಿಸಿತ್ತು. ಹಾಗಾಗಿಯೇ ಎಸ್ 400ರನ್ನು ಕಮಿಷನ್ ಮಾಡಿತ್ತು. ದುರಾದೃಷ್ಟವೆನ್ನುವಂತೆ ಅಂದು ಈ ಎಸ್ 400 ಅಸ್ತ್ರದ ಬೇಡಿಕೆಯನ್ನು ಅಲ್ಲಿನ ಸರ್ಕಾರ ತಳ್ಳಿಹಾಕಿತ್ತು. ಅದಕ್ಕೆ ಮೂಲಕ ಕಾರಣ ಎಸ್ 400 ಅತ್ಯಂತ ದುಬಾರಿ ವೆಚ್ಚವನ್ನು ಬೇಡಿದ್ದೇ ಆಗಿತ್ತು. ಹೀಗಾಗಿ ಆರಂಭದಲ್ಲೇ ಕನಸು ಭಗ್ನವಾಗಿತ್ತು. ಆದರೆ, ಈ ಎಸ್ 400 ಪ್ರೊಜೆಕ್ಟ್ ಗೆ 1991ರಲ್ಲಿ ಮರುಜೀವ ಬಂದಿತ್ತು. ಟ್ರಯಂಫ್ ಎಂಬ ಹೆಸರಿನಲ್ಲಿ ಎಸ್ 400ರ ತಯಾರಿಗೆ ಸಿದ್ಧತೆ ಶುರವಾಗಿತ್ತು. ಆಗಸ್ಟ್ 22, 1991ರಲ್ಲಿ ಅಸ್ತ್ರ ತಯಾರಿ ಕಾರ್ಯಾರಂಭವಾಗಿತ್ತು.
ಮುಂದೆ 1999 ಫೆಬ್ರವರಿ 12ರಂದು ಈ ಟ್ರಯಂಪ್ ನನ್ನು ಮೊದಲ ಬಾರಿ ಪ್ರಯೋಗಿಸಲಾಗಿತ್ತು. ಅಂದು ಎಸ್ 400 ದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸಿತ್ತು. ಇದರ ಪರಿಣಾಮವೆಂಬಂತೆ 2001ರಲ್ಲಿ ರಷ್ಯಾ ಸೇನೆ ಈ ಅಸ್ತ್ರವನ್ನು ಅಧಿಕೃತವಾಗಿ ಮಾನ್ಯ ಮಾಡಿ ಕರ್ತವ್ಯಕ್ಕೆ ನಿಯೋಜಿಸಿಕೊಂಡಿತ್ತು. ಶತ್ರುಗಳ ಡ್ರೋನ್, ವಿಮಾನ, ಕ್ಷಿಪಣಿಗಳನ್ನು 400 ಕಿಲೋಮೀಟರ್ ದೂರದಲ್ಲೇ ಉಡಾಯಿಸುವ ತಾಕತ್ತನ್ನು ಈ ಅಸ್ತ್ರ ತನ್ನ ಗರಿಮೆಯ ಕಿರೀಟಕ್ಕೆ ಸೇರಿಸಿಕೊಂಡಿತ್ತು. ಈ ಎಸ್ 400 ಕ್ಷಿಪಣಿ ತನ್ನೊಳಗೆ 30 ಕೆ 6 ಇ ಸಿಸ್ಟಂನ್ನು ಅಳವಡಿಸಿಕೊಂಡಿದೆ. ಆರು ಸಿಲಿಂಡರ್ ಗಳ ಈ ಕ್ಷಿಪಣಿ ಏಕಕಾಲಕ್ಕೆ 6 ತಾಣಗಳಲ್ಲಿ ದಾಳಿ ಮಾಡೋ ತಾಕತ್ತನ್ನು ಹೊಂದಿದೆ. ಸಂಚಾರಕ್ಕೆ ಅನುವಾಗುಂತೆ ಈ ಕ್ಷಿಪಣಿಯನ್ನು ವಾಹನದ ಮೇಲೆ ಮೌಂಟ್ ಮಾಡಲಾಗಿದೆ. ರಷ್ಯಾ ಈ ಅಸ್ತ್ರವನ್ನು ಈಗಾಗಲೇ 2015ರಲ್ಲಿ ಸಿರಿಯಾ, 2022ರಿಂದ ಈವರೆಗೂ ಉಕ್ರೇನ್, 2014ರಲ್ಲಿ ಚೀನಾ, 2017ರಲ್ಲಿ ಟರ್ಕಿಯಲ್ಲಿ ಈ ಅಸ್ತ್ರವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡುತ್ತಿದೆ. ನಿಗದಿತ ದಾಳಿಯ ಕೀರ್ತಿಯಿಂದಲೇ ಎಸ್ 400 ಅಸ್ತ್ರ ಜಗತ್ತಿನ ಅತಿರಥ ದೇಶಗಳಿಂದ ಬೇಡಿಕೆ ಸೃಷ್ಟಿಸಿಕೊಂಡಿದೆ. ಸೌದಿ ಅರಬ್ 2017ರಲ್ಲಿ ಬರೋಬ್ಬರಿ 15 ಬಿಲಿಯನ್ ಡಾಲರ್ ನ ಒಪ್ಪಂದಕ್ಕೆ ಸಹಿ ಹಾಕಿದೆ. ಇರಾನ್ ಕೂಡಾ 2019ರಲ್ಲಿ ಖರೀದಿಗೆ ಆಸಕ್ತಿ ತೋರಿದೆ. ಈಜಿಪ್ಟ್, ಇರಾಕ್, ಅಮೆರಿಕಾದಿಂದಲೂ ಎಸ್ 400ಕ್ಕೆ ಭರ್ಜರಿ ಡಿಮ್ಯಾಂಡ್ ಸಲ್ಲಿಸಿವೆ. ಇನ್ನು ಭಾರತ ಕೂಡಾ ಎಸ್ 400 ಖರೀದಿ ಒಪ್ಪಂದಕ್ಕೆ ರಷ್ಯಾ ಜೊತೆ ಒಡಂಬಡಿಕೆ ಮಾಡಿಕೊಂಡಿದೆ. 2015ರಲ್ಲಿ ಉಭಯ ದೇಶಗಳ ನಡುವೆ ಒಪ್ಪಂದ ಏರ್ಪಟ್ಟಿದ್ದು, ರಕ್ಷಣಾ ವಲಯದ ಅತಿ ದೊಡ್ಡ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ರಷ್ಯಾ ಜೊತೆ ಭಾರತ ಈ ಖರೀದಿಗೆ 40 ಸಾವಿರ ಕೋಟಿ ವಿನಿಯೋಗಿಸಿದೆ. ಇನ್ನು ಈ ಒಪ್ಪಂದದನ್ವಯ ಭಾರತಕ್ಕೆ ಮೊದಲ ಎಸ್ 400 ಕ್ಷಿಪಣಿ 2021ರಲ್ಲಿ ಹಸ್ತಾಂತರವಾಯಿತು. ಜಮ್ಮು-ಕಾಶ್ಮೀರದ ಪಠಾಣ್ ಕೋಟ್ ನಲ್ಲಿ ಮೊದಲ ಬಾರಿ ಎಸ್ 400 ಪಹರೆ ಆರಂಭವಾಯಿತು. ಎರಡನೇ ಅಸ್ತ್ರವನ್ನು ಜುಲೈ 2022ರಲ್ಲಿ ಸಿಕ್ಕಿಂ ವ್ಯಾಪ್ತಿಯ ಎಲ್ ಎಸಿಯಲ್ಲಿ ನಿಯೋಜಿಸಲಾಗಿದೆ. ಉಳಿದಂತೆ ಮೂರನೇ ಅಸ್ತ್ರವನ್ನು ಫೆಬ್ರವರಿ 2023ರಲ್ಲಿ ಗುಜರಾತ್-ರಾಜಸ್ಥಾನ ಸೆಕ್ಟರ್ ನಲ್ಲಿ ಕಾವಲಿಗೆ ಹಚ್ಚಲಾಗಿದೆ. ಒಪ್ಪಂದದಂತೆ ಇನ್ನೆರೆಡು ಕ್ಷಿಪಣಿಗಳ ಹಸ್ತಾಂತರ ಬಾಕಿಯಿದ್ದು ಈ ವರ್ಷಾಂತ್ಯಕ್ಕೆ ಒಂದು ಮತ್ತು 2026ಕ್ಕೆ ಅಂತಿಮ ಅಸ್ತ್ರ ಭಾರತದ ಬತ್ತಳಿಕೆ ಸೇರಲಿದೆ.