ಭಾರತಕ್ಕೆ ಒಲಿಂಪಿಕ್ಸ್ ನಲ್ಲಿ ಎರಡು ಪದಕ ತಂದು ಕೊಟ್ಟ ಚಿನ್ನದ ಹುಡುಗ ನೀರಜ್ ಚೋಪ್ರಾ ತಮ್ಮ ಕೋಚ್ ಬದಲಾಯಿಸಿದ್ದಾರೆ.
ನೀರಜ್ ಚೋಪ್ರಾಗೆ ಜರ್ಮನ್ ಕೋಚ್ ಕ್ಲಾಸ್ ಬಾರ್ಟೋನಿಟ್ಜ್ ತರಬೇತಿ ನೀಡುತ್ತಿದ್ದರು. ಆದರೆ, ಈಗ ಕೋಚ್ ಬದಲಾಯಿಸಿರುವ ನೀರಜ್, ಮಾಜಿ ಆಟಗಾರ, ಚಿನ್ನದ ಎಸೆತಗಾರ, ದಾಖಲೆಯ ಸರದಾರ, ಮೂರು ಬಾರಿ ಒಲಿಂಪಿಕ್ ಚಾಂಪಿಯನ್ ಜಾನ್ ಝೆಲೆಜ್ನಿ ಅವರನ್ನು ಕೋಚ್ ಆಗಿ ನೇಮಿಸಿಕೊಂಡಿದ್ದಾರೆ.
ಕೋಚ್ ಜಾನ್ ಝೆಲೆಜ್ನಿ ಮೂರು ಬಾರಿ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ಆದವರು. ಅವರ ಹೆಸರಿನಲ್ಲೇ ಇನ್ನೂ ಜಾವೆಲಿನ್ ದಾಖಲೆ ಇದ್ದು, ಅದನ್ನು ಇಲ್ಲಿಯವರೆಗೆ ಯಾರೂ ಮುರಿದಿಲ್ಲ. ಜಾನ್ ಅವರು 1992, 1996 ಮತ್ತು 2000 ರ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಸಾರ್ವಕಾಲಿಕ ಹತ್ತು ಅತ್ಯುತ್ತಮ ಜಾವೆಲಿನ್ ಥ್ರೋಗಳಲ್ಲಿ ಐದು ಥ್ರೋಗಳು ಜಾನ್ ಝೆಲೆಜ್ನಿ ಹೆಸರಿನಲ್ಲಿವೆ. 4 ಬಾರಿ ವಿಶ್ವ ದಾಖಲೆ ಮುರಿದ ಸಾಧನೆ ಕೂಡ ಮಾಡಿದ್ದರು. ಅವರು 1996 ರಲ್ಲಿ ಜರ್ಮನಿಯಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ 98.48 ಮೀಟರ್ ದೂರ ಜಾವೆಲಿನ್ ಎಸೆದು ವಿಶ್ವದಾಖಲೆ ಮಾಡಿದ್ದಾರೆ. ಅದು ಇಲ್ಲಿಯವರೆಗೆ ದಾಖಲೆಯಾಗಿದೆ. ಜಾನ್ ಈಗಾಗಲೇ ಹಲವಾರು ಸಾಧಕರಿಗೆ ಜಾವೆಲಿನ್ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ.
ಈ ವೇಳೆ ಮಾತನಾಡಿದ ನೀರಜ್, ನನ್ನ ಆರಂಭದ ದಿನಗಳಲ್ಲಿ ನನ್ನ ಮೇಲೆ ಝೆಲೆಜ್ನಿ ಅವರ ತಂತ್ರ ಹಾಗೂ ನಿಖರತೆ ಪ್ರಭಾವ ಬೀರಿತ್ತು. ಈ ಹಿನ್ನೆಲೆಯಲ್ಲಿ ನಾನು ಝೆಲೆಜ್ನಿ ಅವರ ಜಾವೆಲಿನ್ ಥ್ರೋ ವೀಡಿಯೊಗಳನ್ನು ವೀಕ್ಷಿಸಲು ಸಾಕಷ್ಟು ಸಮಯವನ್ನು ಕಳೆದಿದ್ದೇನೆ. ನಮ್ಮಿಬ್ಬರ ಎಸೆಯುವ ಶೈಲಿಗಳಲ್ಲಿ ಹೋಲಿಕೆ ಇರುವುದರಿಂದ ನಾನು ಅವರನ್ನೇ ಆಯ್ಕೆ ಮಾಡಿದ್ದೇನೆ ಎನ್ನಲಾಗಿದೆ.