ನವದೆಹಲಿ: ಭವಿಷ್ಯದ ಸುಸ್ಥಿರ ಸಾರಿಗೆಯತ್ತ ಇಟ್ಟ ದಿಟ್ಟ ಹಾಗೂ ಐತಿಹಾಸಿಕ ಹೆಜ್ಜೆ ಎಂಬಂತೆ ಭಾರತವು ಶೀಘ್ರದಲ್ಲೇ ತನ್ನ ಮೊದಲ ಹೈಡ್ರೋಜನ್-ಇಂಧನ ರೈಲನ್ನು(Hydrogen Train) ಪರಿಚಯಿಸಲು ಸಜ್ಜಾಗಿದೆ. ಭಾರತದ ಮೊದಲ ಹೈಡ್ರೋಜನ್ ರೈಲಿಗೆ ಮಾ.31ರಂದು ಚಾಲನೆ ನೀಡುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಈ ರೈಲು ಹರ್ಯಾಣದ ಜಿಂದ್ ಮತ್ತು ಸೋನಿಪತ್ ನಡುವೆ ಸಂಚಾರ ನಡೆಸಲಿದೆ. ಇಂಗಾಲ ಮುಕ್ತ ಪರಿಸರ ನಿರ್ಮಾಣದ ನಿಟ್ಟಿನಲ್ಲಿ ಭಾರತ ಸರ್ಕಾರದ ಮಹತ್ವದ ಕ್ರಮ ಇದಾಗಿರಲಿದೆ.
ಶಬ್ದ ಮತ್ತು ವಾಯು ಮಾಲಿನ್ಯವನ್ನು ತಗ್ಗಿಸುವಲ್ಲಿ ಹೈಡ್ರೋಜನ್ ರೈಲು ಪ್ರಮುಖ ಪಾತ್ರ ವಹಿಸುವುದರಿಂದ ಇದು ಭವಿಷ್ಯದಲ್ಲಿ ಸುಸ್ಥಿರ ಮತ್ತು ಅತ್ಯುತ್ತಮ ಸಾರಿಗೆ ಎನಿಸಿಕೊಳ್ಳಲಿದೆ. ಹರ್ಯಾಣದಲ್ಲಿ ಅತ್ಯುತ್ತಮ ರೈಲು ಜಾಲವಿದ್ದು, ಇಲ್ಲಿ ಮಾಲಿನ್ಯ ತಡೆಗಟ್ಟುವ ವಾಹನಗಳಿಗೆ ಹೆಚ್ಚು ಬೇಡಿಕೆ ಇರುವುದರಿಂದ ಮೊದಲ ಹೈಡ್ರೋಜನ್ ರೈಲನ್ನು ಹರ್ಯಾಣದಲ್ಲೇ ಚಾಲನೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. 2030ರ ವೇಳೆಗೆ ಭಾರತದ ರೈಲ್ವೆಯನ್ನು ಇಂಗಾಲ ಮುಕ್ತಗೊಳಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದ್ದು, ಈ ನಿಟ್ಟಿನಲ್ಲಿ ಹೈಡ್ರೋಜನ್ ರೈಲು ಮಹತ್ವದ ಕೊಡುಗೆ ನೀಡಲಿದೆ ಎನ್ನಲಾಗಿದೆ.
ರೈಲಿನ ವಿಶೇಷತೆ
ಈ ರೈಲುಗಳು ಹೈಡ್ರೋಜನ್ ಅಣುಗಳಲ್ಲಿರುವ ಶಕ್ತಿಯನ್ನು ಬಳಕೆ ಮಾಡಿಕೊಂಡು ಚಾಲನೆಗೊಳ್ಳಲಿದೆ. ಇದು ಹೊಗೆಯ ಬದಲಿಗೆ ನೀರನ್ನು ಬಿಡುಗಡೆ ಮಾಡುತ್ತದೆ. ಗಂಟೆಗೆ 110 ಕಿ.ಮೀ. ಗರಿಷ್ಠ ವೇಗದಲ್ಲಿ ಇದು ಚಲಿಸಲಿದ್ದು, ಕ್ಷಿಪ್ರವಾಗಿ ತನ್ನ ಗುರಿಯನ್ನು ತಲುಪಲಿದೆ. ಒಂದು ಬಾರಿಗೆ 2638 ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಈ ಮೂಲಕ ಪರಿಸರ ಸ್ನೇಹಿ ಸಾರಿಗೆ ವಿಧಾನವು ಹೆಚ್ಚಿನವರಿಗೆ ತಲುಪಲಿದೆ. 1200 ಎಚ್‌ಪಿ ಎಂಜಿನ್ ಹೊಂದಿರುವ ಮೂಲಕ ವಿಶ್ವದ ಶಕ್ತಿಶಾಲಿ ರೈಲು ಎನಿಸಿಕೊಳ್ಳಲಿದ್ದು, ಭಾರತದ ತಾಂತ್ರಿಕ ಸಾಮರ್ಥ್ಯಕ್ಕೆ ಸಾಕ್ಷಿಯಾಗಲಿದೆ.
ಪರಿಸರ ಸ್ನೇಹಿ ರೈಲ್ವೆ ಸಾರಿಗೆಯಲ್ಲಿ ಹೈಡ್ರೋಜನ್ ರೈಲುಗಳು ಪ್ರಮುಖ ಆವಿಷ್ಕಾರವಾಗಿದೆ. ಸಾಂಪ್ರದಾಯಿಕ ಡೀಸೆಲ್ ಲೋಕೋಮೋಟಿವ್ ಗಳಿಗೆ ವ್ಯತಿರಿಕ್ತವಾಗಿ, ಹೈಡ್ರೋಜನ್ ರೈಲುಗಳು ಹೈಡ್ರೋಜನ್ ಇಂಧನ ಕೋಶಗಳಲ್ಲಿ ಚಲಿಸುತ್ತವೆ. ನೀರು ಮತ್ತು ಶಾಖವನ್ನು ತ್ಯಾಜ್ಯ ಉತ್ಪನ್ನಗಳಾಗಿ ಮಾತ್ರ ನೀಡುತ್ತವೆ. ಇದರಿಂದಾಗಿ ಇಂಗಾಲದ ಹೊರಸೂಸುವಿಕೆ ಮತ್ತು ಶಬ್ದ ಮಾಲಿನ್ಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.
ಹೈಡ್ರೋಜನ್ ರೈಲುಗಳ ಬಳಕೆಯು ದೀರ್ಘಕಾಲೀನ ಆರ್ಥಿಕ ಪ್ರಯೋಜನಗಳನ್ನೂ ಒದಗಿಸುತ್ತದೆ. ಹೈಡ್ರೋಜನ್ ಮೂಲಸೌಕರ್ಯದಲ್ಲಿ ಆರಂಭಿಕ ಹೂಡಿಕೆಯ ವೆಚ್ಚವು ಹೆಚ್ಚಾಗಿದ್ದರೂ, ಇದರಿಂದ ದೀರ್ಘಕಾಲೀನ ಇಂಧನ ಉಳಿತಾಯ ಮತ್ತು ಪರಿಸರ ಅನುಕೂಲಗಳು ಸಾಕಷ್ಟಿವೆ ಎಂದು ತಜ್ಞರು ಹೇಳಿದ್ದಾರೆ.
ಈಗಾಗಲೇ ಜರ್ಮನಿ, ಚೀನಾ ಮತ್ತು ಯುಕೆಯಂತಹ ರಾಷ್ಟ್ರಗಳು ಹೈಡ್ರೋಜನ್ ರೈಲುಗಳನ್ನು ಓಡಿಸುತ್ತಿದ್ದು, ಈ ರೈಲು ತಂತ್ರಜ್ಞಾನವನ್ನು ಅಳವಡಿಸಿಕೊಂಡ ರಾಷ್ಟ್ರಗಳ ಸಾಲಿಗೆ ಸದ್ಯದಲ್ಲೇ ಭಾರತವೂ ಸೇರ್ಪಡೆಯಾಗಲಿದೆ.