ಪ್ಯಾರಿಸ್ ಒಲಿಂಪಿಕ್ಸ್ ಮುಕ್ತಾಯವಾಗಿದೆ. ಭಾರತೀಯರ ಬೇಸರದೊಂದಿಗೆ 33ನೇ ಆವೃತ್ತಿಯ ಒಲಿಂಪಿಕ್ಸ್ ಮುಕ್ತಾಯವಾಗಿದ್ದು, 34ನೇ ಆವೃತ್ತಿಯ ಒಲಿಂಪಿಕ್ಸ್ 2028ರಲ್ಲಿ ನಡೆಯಲ್ಲಿದೆ. ಈಗಿನಿಂದಲೇ ಈ ಒಲಿಂಪಿಕ್ಸ್ ತಯಾರಿ ನಡೆಯುತ್ತಿದೆ. ಈ ಮಹಾ ಕ್ರೀಡಾಕೂಟಕ್ಕೆ ಅಮೆರಿಕದ ಲಾಸ್ ಏಂಜಲೀಸ್ ನಗರ ಆತಿಥ್ಯವಹಿಸುತ್ತಿದೆ. ನಂತರ ನಡೆಯುವ 2032 ರ ಒಲಿಂಪಿಕ್ಸ್ ಗೆ ಆಸ್ಟ್ರೇಲಿಯಾದ ಬ್ರಿಸ್ಬೇನ್ ಆತಿಥ್ಯ ವಹಿಸಲಿದೆ. ಆದರೆ, ನಂತರದ ಅಂದರೆ, 2036 ರಲ್ಲಿ ನಡೆಯಲ್ಲಿರುವ ಒಲಿಂಪಿಕ್ಸ್ ಗೆ ಆತಿಥ್ಯ ವಹಿಸಲು ಹಲವಾರು ದೇಶಗಳು ಪೈಪೋಟಿ ನಡೆಸುತ್ತಿವೆ. ಈ ಪೈಕಿ ಭಾರತ ಕೂಡ ಒಂದಾಗಿದೆ.
ಇದಕ್ಕೆ ಪೂರಕ ಎಂಬಂತೆ ದೇಶದ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಹೇಳಿಕೆ ನೀಡಿದ್ದಾರೆ. 78ನೇ ಸ್ವಾತಂತ್ರ್ಯ ಸಂಭ್ರಮದ ಪ್ರಯುಕ್ತ ದೆಹಲಿಯ ಕೆಂಪುಕೋಟೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, 2036 ರ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸುವ ಭಾರತದ ಸಂಕಲ್ಪವನ್ನು ಹೇಳಿದ್ದಾರೆ. ಒಲಿಂಪಿಕ್ಸ್ ಕ್ರೀಡಾಕೂಟವನ್ನು ಆಯೋಜಿಸಲು ಸಿದ್ಧತೆ ನಡೆಸುತ್ತಿದೆ. 2036ರಲ್ಲಿ ನಡೆಯಲಿರುವ ಒಲಿಂಪಿಕ್ಸ್ ಭಾರತದ ನೆಲದಲ್ಲಿ ನಡೆಯಬೇಕು ಎಂಬುವುದು ಕನಸು. ಅದಕ್ಕಾಗಿ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತೀಯ ಆಟಗಾರರನ್ನು ಅಭಿನಂದಿಸಿದ ಪ್ರಧಾನಿ ಮೋದಿ, ‘ಒಲಿಂಪಿಕ್ಸ್ ಜಗತ್ತಿನಲ್ಲಿ ಭಾರತದ ಧ್ವಜವನ್ನು ಹಾರಿಸಿದ ಆ ಯುವಕರು ಇಂದು ತ್ರಿವರ್ಣ ಧ್ವಜದ ಕೆಳಗೆ ನಮ್ಮೊಂದಿಗೆ ಕುಳಿತಿದ್ದಾರೆ. 140 ಕೋಟಿ ದೇಶವಾಸಿಗಳ ಪರವಾಗಿ ನಾನು ನಮ್ಮ ದೇಶದ ಎಲ್ಲಾ ಆಟಗಾರರನ್ನು ಅಭಿನಂದಿಸುತ್ತೇನೆ. ಹೊಸ ಕನಸುಗಳು, ಹೊಸ ನಿರ್ಣಯಗಳು ಮತ್ತು ಪ್ರಯತ್ನಗಳೊಂದಿಗೆ ನಾವು ಹೊಸ ಗುರಿಗಳತ್ತ ಸಾಗುತ್ತೇವೆ ಎಂದು ಹೊಗಳಿದ್ದಾರೆ.
ಮುಂದಿನ ವರ್ಷ ಐಒಸಿ ಅಧ್ಯಕ್ಷರ ಆಯ್ಕೆ ನಡೆಯಲಿದ್ದು, ಆ ನಂತರವೇ 2036ರ ಒಲಿಂಪಿಕ್ಸ್ ಆತಿಥ್ಯ ವಹಿಸುವ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.