ಇಸ್ಲಾಮಾಬಾದ್: ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಘರ್ಷದಲ್ಲಿ ಭಾರತೀಯ ಸೇನಾಪಡೆಯ ಶೌರ್ಯದ ಕುರಿತು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದರಲ್ಲೂ, ರಾಫೆಲ್ ಯುದ್ಧವಿಮಾನ, ಬ್ರಹ್ಮೋಸ್ ಕ್ಷಿಪಣಿಗಳನ್ನು ಬಳಸಿ ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿರುವ ಕುರಿತು ಮೆಚ್ಚುಗೆ ವ್ಯಕ್ತವಾಗುತ್ತಿವೆ. ಇದರ ಬೆನ್ನಲ್ಲೇ, ರಕ್ಷಣಾ ಸಾಮಗ್ರಿಗಳು, ಶಸ್ತ್ರಾಸ್ತ್ರಗಳ ಉತ್ಪಾದನೆಯಲ್ಲಿ ಭಾರತವು ಆತ್ಮನಿರ್ಭರತೆ ಸಾಧಿಸಿದೆ. ಹೌದು, ಕಳೆದ 11 ವರ್ಷಗಳಲ್ಲಿ ದೇಶದ ರಕ್ಷಣಾ ಸಾಮಗ್ರಿಗಳ ರಫ್ತಿನ ಪ್ರಮಾಣ 11 ಪಟ್ಟು ಜಾಸ್ತಿಯಾಗಿದೆ ಎಂದು ಕೇಂದ್ರ ಸರ್ಕಾರವೇ ಮಾಹಿತಿ ನೀಡಿದೆ.
2013-24ನೇ ಹಣಕಾಸು ವರ್ಷದಲ್ಲಿ ಭಾರತದ ರಕ್ಷಣಾ ಸಾಮಗ್ರಿಗಳ ರಫ್ತಿನ ಪ್ರಮಾಣವು 686 ಕೋಟಿ ರೂ. ಇತ್ತು. ಇದು 2024-25ನೇ ಸಾಲಿನಲ್ಲಿ23,622 ಕೋಟಿ ರೂ.ಗೆ ಏರಿಕೆಯಾಗಿದೆ. ಇದರೊಂದಿಗೆ ರಫ್ತಿನ ಪ್ರಮಾಣ ಶೇ.42.85ರಷ್ಟು ಜಾಸ್ತಿಯಾಗಿದೆ ಎಂದು ದೇಶದ ರಕ್ಷಣಾ ಸಚಿವಾಲಯವೇ ಮಾಹಿತಿ ನೀಡಿದೆ. ಅಲ್ಲದೆ, 2029ರೊಳಗೆ 80 ದೇಶಗಳಿಗೆ 50 ಸಾವಿರ ಕೋಟಿ ರೂ. ಮೌಲ್ಯದ ಸಾಮಗ್ರಿಗಳನ್ನು ರಫ್ತು ಮಾಡುವ ಗುರಿ ಇದೆ ಎಂದು ತಿಳಿಸಿದೆ.
ದೇಶದ ರಕ್ಷಣಾ ಬಜೆಟ್ ಕೂಡ ಎರಡೂವರೆ ಪಟ್ಟು ಹೆಚ್ಚಳವಾಗಿದೆ. 2013-24ನೇ ಹಣಕಾಸು ವರ್ಷದ ಬಜೆಟ್ ನಲ್ಲಿ ದೇಶದ ರಕ್ಷಣಾ ಕ್ಷೇತ್ರಕ್ಕೆ 2.23 ಲಕ್ಷ ಕೋಟಿ ರೂ. ಮೀಸಲಿಡಲಾಗಿತ್ತು. ಆದರೆ, ಇದು 2025-26ನೇ ಹಣಕಾಸು ವರ್ಷದಲ್ಲಿ 6.81 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಖರೀದಿಯಿಂದ ಹಿಡಿದು, ತಂತ್ರಜ್ಞಾನ ಕ್ಷೇತ್ರಕ್ಕಾಗಿ ಹಣವನ್ನು ಬಳಸಿಕೊಳ್ಳಲಾಗುತ್ತಿದೆ.
ಭಾರತವು ಗನ್ ಗಳು, ಬ್ರಹ್ಮೋಸ್ ಕ್ಷಿಪಣಿಗಳು ಸೇರಿ ಹಲವು ಶಸ್ತ್ರಾಸ್ತ್ರಗಳನ್ನು ಭಾರತದಿಂದ ಬೇರೆ ದೇಶಗಳಿಗೆ ರಫ್ತು ಮಾಡುತ್ತಿದೆ. ಬ್ರಹ್ಮೋಸ್ ಕ್ಷಿಪಣಿಗಳಿಗೇ 17 ದೇಶಗಳಿಂದ ಹೆಚ್ಚಿನ ಬೇಡಿಕೆ ಉಂಟಾಗಿದೆ. ರಕ್ಷಣಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ ಕಾರಣಕ್ಕಾಗಿಯೇ ಪಾಕಿಸ್ತಾನವು ಕದನವಿರಾಮಕ್ಕಾಗಿ ಅಮೆರಿಕದ ಕದ ತಟ್ಟಿತು ಎಂದು ಹೇಳಲಾಗುತ್ತಿದೆ.