ನವದೆಹಲಿ: ಭಾರತದ ಪ್ರಜಾಪ್ರಭುತ್ವದ ಸಾಂವಿಧಾನಿಕ ಚೌಕಟ್ಟಿನ ಮೇಲೆ ಪೂರ್ಣ ಪ್ರಮಾಣದ ದಾಳಿ ನಡೆಯುತ್ತಿದೆ ಮತ್ತು ಆಡಳಿತಾರೂಢ ಬಿಜೆಪಿ ಅದನ್ನು ತನಗೆ ಅನುಕೂಲವಾಗುವಂತೆ ಬಳಸಿಕೊಳ್ಳುತ್ತಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಜರ್ಮನಿಯ ಬರ್ಲಿನ್‌ನಲ್ಲಿರುವ ಹರ್ಟಿ ಸ್ಕೂಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದ ಚುನಾವಣಾ ವ್ಯವಸ್ಥೆ ಮತ್ತು ತನಿಖಾ ಸಂಸ್ಥೆಗಳ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿ ಹೇಳಿದ್ದೇನು?
ಭಾರತದಲ್ಲಿ ಸಾಂವಿಧಾನಿಕ ಸಂಸ್ಥೆಗಳು ನಿರ್ವಹಿಸಬೇಕಾದ ಪಾತ್ರವನ್ನು ನಿರ್ವಹಿಸುತ್ತಿಲ್ಲ ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ. “ಕಾಂಗ್ರೆಸ್ ದೃಷ್ಟಿಕೋನದಲ್ಲಿ, ನಾವು ಈ ಸಾಂವಿಧಾನಿಕ ಚೌಕಟ್ಟನ್ನು ನಿರ್ಮಿಸಲು ಸಹಾಯ ಮಾಡಿದ್ದೆವು, ಹಾಗಾಗಿ ನಾವೆಂದೂ ಅವುಗಳನ್ನು ನಮ್ಮದೆಂದು ಭಾವಿಸಿರಲಿಲ್ಲ. ಆದರೆ ಬಿಜೆಪಿ ಹಾಗಲ್ಲ, ಅವರು ಈ ಸಂಸ್ಥೆಗಳನ್ನು ತಮಗೆ ಸೇರಿದ್ದು ಎಂದು ಭಾವಿಸುತ್ತಾರೆ ಮತ್ತು ರಾಜಕೀಯ ಅಧಿಕಾರಕ್ಕಾಗಿ ಅದನ್ನು ಆಯುಧವನ್ನಾಗಿ ಬಳಸುತ್ತಿದ್ದಾರೆ,” ಎಂದು ಅವರು ದೂರಿದ್ದಾರೆ.
ಸಿಬಿಐ ಮತ್ತು ಜಾರಿ ನಿರ್ದೇಶನಾಲಯದಂತಹ ಸಂಸ್ಥೆಗಳನ್ನು ಉಲ್ಲೇಖಿಸಿದ ಅವರು, “ಈ ಸಂಸ್ಥೆಗಳು ಬಿಜೆಪಿ ನಾಯಕರ ವಿರುದ್ಧ ಎಷ್ಟು ಪ್ರಕರಣಗಳನ್ನು ದಾಖಲಿಸಿವೆ ಎಂದು ನೋಡಿದರೆ ಉತ್ತರ ‘ಶೂನ್ಯ’. ಆದರೆ ವಿರೋಧ ಪಕ್ಷಗಳ ನಾಯಕರ ವಿರುದ್ಧದ ಪ್ರಕರಣಗಳನ್ನು ನೋಡಿ, ವ್ಯತ್ಯಾಸ ತಿಳಿಯುತ್ತದೆ. ಬಿಜೆಪಿಯ ಬಳಿ ಇರುವ ಹಣ ಮತ್ತು ವಿಪಕ್ಷಗಳ ಬಳಿ ಇರುವ ಹಣದ ಅನುಪಾತ 30:1 ರಷ್ಟಿದೆ,” ಎಂದು ರಾಹುಲ್ ಅಂಕಿಅಂಶಗಳ ಸಮೇತ ವಾಗ್ದಾಳಿ ನಡೆಸಿದ್ದಾರೆ.
“ಚುನಾವಣೆಯಲ್ಲಿ ಸಮಸ್ಯೆಯಿದೆ ಎಂದು ಸುಮ್ಮನೆ ಕೂರುವುದು ಸಾಲದು, ನಾವು ಅದನ್ನು ಎದುರಿಸುತ್ತೇವೆ ಮತ್ತು ವಿರೋಧ ಪಕ್ಷದ ಪ್ರತಿರೋಧವನ್ನು ವ್ಯಕ್ತಪಡಿಸಿ ಯಶಸ್ವಿಯಾಗುತ್ತೇವೆ,” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಇಂಡಿಯಾ (INDIA) ಒಕ್ಕೂಟದ ಬಗ್ಗೆ ಮಾತನಾಡಿದ ಅವರು, “ನಮ್ಮ ಒಕ್ಕೂಟದ ಯಾವುದೇ ಪಕ್ಷವು ಆರ್‌ಎಸ್‌ಎಸ್ ಸಿದ್ಧಾಂತವನ್ನು ಒಪ್ಪುವುದಿಲ್ಲ ಎಂಬ ವಿಷಯದಲ್ಲಿ ನಾವೆಲ್ಲರೂ ಒಂದಾಗಿದ್ದೇವೆ,” ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ನಾಯಕರ ಆಕ್ರೋಶ
ವಿದೇಶಿ ನೆಲದಲ್ಲಿ ರಾಹುಲ್ ಗಾಂಧಿ ನೀಡಿರುವ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಬಿಜೆಪಿ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರು, “ಸಂಸತ್ತಿನ ಅಧಿವೇಶನ ನಡೆಯುತ್ತಿರುವಾಗ ರಾಹುಲ್ ಗಾಂಧಿ ಜರ್ಮನಿಯಲ್ಲಿದ್ದಾರೆ. ಪ್ರಧಾನಿ ಮೋದಿಯವರಿಗೆ ವಿಶ್ವದಾದ್ಯಂತ ಗೌರವ ಸಿಗುತ್ತಿರುವಾಗ, ರಾಹುಲ್ ವಿದೇಶಕ್ಕೆ ಹೋಗಿ ಭಾರತವನ್ನು ನಿಂದಿಸುತ್ತಿದ್ದಾರೆ,” ಎಂದು ಕಿಡಿಕಾರಿದ್ದಾರೆ.
ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಅವರು ರಾಹುಲ್ ಗಾಂಧಿಯವರ ಭೇಟಿಯನ್ನು “ಭಾರತದ ಮಾನಹಾನಿ ಪ್ರವಾಸ” ಎಂದು ಕರೆದಿದ್ದಾರೆ. “ಅವರು ವಿರೋಧ ಪಕ್ಷದ ನಾಯಕರಲ್ಲ, ಬದಲಾಗಿ ಅಪಪ್ರಚಾರದ ನಾಯಕ. ಭಾರತದಲ್ಲಿ ಉತ್ಪಾದನೆ ಇಲ್ಲ ಎಂದು ಸುಳ್ಳು ಹೇಳುವ ಅವರು, ಚೀನಾವನ್ನು ಹೊಗಳುತ್ತಾರೆ. ಚೀನಾವನ್ನು ಹೊಗಳುವುದು, ಭಾರತವನ್ನು ಹೀಯಾಳಿಸುವುದೇ ಅವರ ಗುರುತಾಗಿದೆ,” ಎಂದು ಪೂನಾವಾಲಾ ಟೀಕಿಸಿದ್ದಾರೆ.
ಇದನ್ನೂ ಓದಿ; ರೆಡ್ ಹ್ಯಾಂಡ್ ಆಗಿ ಲೋಕಾ ಬಲೆಗೆ ಬಿದ್ದ ಚಿಕ್ಕಜಾಲ ಸಬ್ ಇನ್ಸ್‌ಪೆಕ್ಟರ್



















