ನವದೆಹಲಿ : ಗಲ್ಫ್ ರಾಷ್ಟ್ರಗಳಲ್ಲಿ ಆತಂಕದ ವಾತಾವರಣ ಶುರುವಾಗಿದೆ. ಇಸ್ರೇಲ್ ಹಾಗೂ ಅಮೆರಿಕ ಜಂಟಿಯಾಗಿ ಇರಾನ್ ವಿರುದ್ಧ ತೊಡೆ ತಟ್ಟಿದ್ದು, ಭಾರೀ ಯುದ್ಧದ ಆತಂಕ ಮೂಡಿದೆ. ಈ ಹಿನ್ನೆಲೆಯಲ್ಲಿ ಟೆಲ್ ಅವೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಇಸ್ರೇಲ್‌ನಲ್ಲಿರುವ ಭಾರತೀಯ ಪ್ರಜೆಗಳಿಗೆ ಸಲಹೆ-ಸೂಚನೆ ನೀಡಿದೆ.
ಆ ಪ್ರದೇಶದಲ್ಲಿ ಉದ್ವಿಗ್ನತೆ, ಆತಂಕ ಹೆಚ್ಚಾಗಿದೆ. ಹೀಗಾಗಿ ಹೆಚ್ಚು ಜಾಗರೂಕರಾಗಿರಿ. ಇಸ್ರೇಲಿ ಅಧಿಕಾರಿಗಳು ಮತ್ತು ಹೋಮ್ ಫ್ರಂಟ್ ಕಮಾಂಡ್ ಹೊರಡಿಸಿದ ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸಿ. ಗೊತ್ತುಪಡಿಸಿದ ಆಶ್ರಯ ತಾಣಗಳ ಬಳಿಯೇ ಇರಿ. ನಿವಾಸ ಅಥವಾ ಕೆಲಸದ ಸ್ಥಳದ ಬಳಿ ಇರುವ ಸುರಕ್ಷಿತ ಸ್ಥಳಗಳನ್ನು ಸೇರಿಕೊಳ್ಳಿ ಎಂದು ಸಲಹೆ ನೀಡಲಾಗಿದೆ.
ಮುಂದಿನ ಸೂಚನೆ ಬರುವವರೆಗೂ ಇಸ್ರೇಲ್‌ನೊಳಗೆ ಯಾವುದೇ ರೀತಿಯ ಅನಗತ್ಯ ಪ್ರಯಾಣ ಮಾಡಬಾರದು ಎಂದು ಭಾರತೀಯ ಪ್ರಜೆಗಳಿಗೆ ಸೂಚಿಸಲಾಗಿದೆ. ಸ್ಥಳೀಯ ಸುದ್ದಿಗಳು, ಅಧಿಕೃತ ಪ್ರಕಟಣೆಗಳು ಮತ್ತು ತುರ್ತು ಎಚ್ಚರಿಕೆಗಳನ್ನು ನಿಯಮಿತವಾಗಿ ಗಮನಿಸುತ್ತಿರಲು ಸೂಚಿಸಲಾಗಿದೆ.
“ಯಾವುದೇ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ, ಭಾರತೀಯ ಪ್ರಜೆಗಳು ಸಹಾಯವಾಣಿ ಮೂಲಕ ಟೆಲ್ ಅವೀವ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯನ್ನು ಸಂಪರ್ಕಿಸುವಂತೆ ಅಥವಾ ಫೋ.ನಂ: +972-54-7520711; ಇ-ಮೇಲ್: cons1.telaviv@mea.gov.in ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅಲ್ಲದೇ, ಇರಾನ್, ಕತಾರ್ ಭಾರತೀಯ ಪ್ರಜೆಗಳಿಗೆ ಕೂಡ ಸಲಹೆ ನೀಡಲಾಗಿದೆ. ತುರ್ತು ಸಂದರ್ಭಗಳಲ್ಲಿ, ಭಾರತೀಯರು ಈ ಕೆಳಗಿನ ಸಂಖ್ಯೆಗಳಲ್ಲಿ ರಾಯಭಾರ ಕಚೇರಿಯನ್ನು ಸಂಪರ್ಕಿಸಬಹುದು: +989128109115, +989128109109, +989128109102 ಮತ್ತು +989932179359 ಸೂಚಿಸಲಾಗಿದೆ.
ಕತಾರ್‌ನಲ್ಲಿರುವ ಭಾರತೀಯ ಪ್ರಜೆಗಳಿಗೆ ರಾಯಭಾರ ಕಚೇರಿ ಸಹಾಯವಾಣಿ ಸಂಖ್ಯೆ 00974-55647502 ಹಾಗೂ cons.doha@mea.gov.inಗೆ ಸಂಪರ್ಕಿಸುವಂತೆ ಸಲಹೆ ನೀಡಲಾಗಿದೆ.
ಇದನ್ನೂ ಓದಿ : ಗಲ್ಫ್ ರಾಷ್ಟ್ರಗಳ ಮೇಲೆ ಮುಗಿಬಿದ್ದ ಇರಾನ್ | ಭಾರತೀಯರಲ್ಲೂ ಆತಂಕ


















