ಕೋಟಿ-ಕೋಟಿ ಭಾರತೀಯರ ಕನಸು ನನಸಾಗಿದೆ. 9ನೇ ಆವೃತ್ತಿಯ ಟಿ20 ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ ಭಾರತ ಗೆದ್ದು ಬೀಗಿದೆ.
ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 7 ರನ್ ಗಳಿಂದ ಸೋಲಿಸಿದ ಭಾರತ ತಂಡವು ದಾಖಲೆಯ 2ನೇ ಬಾರಿಗೆ ವಿಶ್ವಕಪ್ ಎತ್ತಿಹಿಡಿದಿದೆ. ಈ ಮೂಲಕ 17 ವರ್ಷಗಳ ನಂತರ ಮತ್ತೊಮ್ಮೆ ಟಿ20 ಚಾಂಪಿಯನ್ ಆಗುವಲ್ಲಿ ಯಶಸ್ವಿಯಾಗಿದೆ. 2007 ರಲ್ಲಿ ನಡೆದಿದ್ದ ಟಿ20 ವಿಶ್ವಕಪ್ ನ ಚೊಚ್ಚಲ ಆವೃತ್ತಿಯಲ್ಲಿ ಟೀಂ ಇಂಡಿಯಾ ಎಂಎಸ್ ಧೋನಿ ನಾಯಕಯತ್ವದಲ್ಲಿ ಟಿ20 ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿತ್ತು. ಆನಂತರ 2016 ರಲ್ಲಿ ಮತ್ತೊಮ್ಮೆ ಫೈನಲ್ ತಲುಪಿತ್ತು. ಆದರೆ, ಅಲ್ಲಿ ಶ್ರೀಲಂಕಾ ವಿರುದ್ಧ ಮುಗ್ಗರಿಸಿತ್ತು. ಆದರೆ, ಈ ಬಾರಿ ಗೆಲುವಿನ ನಗೆ ಬೀರಿತು. ಅಷ್ಟೇ ಅಲ್ಲ ಭಾರತೀಯ ತಂಡದ ಕೋಚ್ ರಾಹುಲ್ ದ್ರಾವಿಡ್ ಗೆ ಗೆಲುವಿನ ವಿದಾಯ ಹೇಳಿತು.
ಬ್ರಿಡ್ಜ್‌ಟೌನ್‌ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ಟಾಸ್ ಗೆದ್ದ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. 7 ಇನ್ನಿಂಗ್ಸ್‌ಗಳಲ್ಲಿ ವಿಫಲರಾಗಿದ್ದ ಕೊಹ್ಲಿ ಮೊದಲ ಓವರ್‌ನಲ್ಲಿಯೇ 3 ಬೌಂಡರಿ ಬಾರಿಸುವ ಮೂಲಕ ವೇಗದ ಆರಂಭ ನೀಡಿದರು. ಆದರೆ, ಕೇಶವ್ ಮಹಾರಾಜ್ ಅವರು ಮೊದಲು ರೋಹಿತ್ ಮತ್ತು ನಂತರ ರಿಷಬ್ ಪಂತ್ ಅವರ ವಿಕೆಟ್ ಕಬಳಿಸುವ ಮೂಲಕ ಟೀಂ ಇಂಡಿಯಾಕ್ಕೆ ದೊಡ್ಡ ಹೊಡೆತ ನೀಡಿದರು. ಕಗಿಸೊ ರಬಾಡ ಐದನೇ ಓವರ್‌ನಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಔಟ್ ಮಾಡುವ ಮೂಲಕ ಭಾರತಕ್ಕೆ ದೊಡ್ಡ ಆಘಾತ ನೀಡಿದರು. ಹೀಗಾಗಿ ಟೀಂ ಇಂಡಿಯಾ ಕೇವಲ 34 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು.

ಬ್ಯಾಟಿಂಗ್ ನಲ್ಲಿ ಬಡ್ತಿ ಪಡೆದು ಬಂದ ಅಕ್ಷರ್ ಪಟೇಲ್ ವೇಗದ ಆರಂಭದ ನಂತರ ಕೊಹ್ಲಿ ಒಂದು ತುದಿಯಿಂದ ಮುನ್ನಡೆ ಕಾಯ್ದುಕೊಂಡರೆ, ಅಕ್ಷರ್ ಪಟೇಲ್ ನಡುನಡುವೆ ಬೌಂಡರಿ ಬಾರಿಸಿ ತಂಡದ ಸ್ಕೋರ್ ಹೆಚ್ಚಿಸುತ್ತ ಸಾಗಿದರು. ನಾಲ್ಕನೇ ವಿಕೆಟ್‌ಗೆ 72 ರನ್‌ಗಳ ಜೊತೆಯಾಟ ನೀಡಿದರು. ಅಕ್ಷರ್ ಪಟೇಲ್ 31 ಎಸತೆಗಳಲ್ಲಿ 47 ಗಳಿಸಿ ರನೌಟ್ ಆದರು. ನಂತರ ಕೊಹ್ಲಿ ಮತ್ತು ಶಿವಂ ದುಬೆ ಕೂಡ 57 ರನ್ ಜೊತೆಯಾಟ ನೀಡಿದರು. ಈ ಸಮಯದಲ್ಲಿ, ಕೊಹ್ಲಿ ನಿಧಾನಗತಿಯ ಅರ್ಧಶತಕವನ್ನು ಪೂರ್ಣಗೊಳಿಸಿದರು. ಆದರೆ ಕೊನೆಯ ಓವರ್‌ಗಳಲ್ಲಿ ಹೊಡಿಬಡಿ ಆಟಕ್ಕೆ ಮುಂದಾದ ಕೊಹ್ಲಿ, ತಂಡ 176 ರನ್ ಕಲೆಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು. ಅಂತಿಮವಾಗಿ ಕೊಹ್ಲಿ 59 ಎಸೆತಗಳಲ್ಲಿ 6 ಬೌಂಟರಿ ಹಾಗೂ 2 ಸಿಕ್ಸರ್ ಸಹಿತ 76 ರನ್ ಗಳಿಸಿದರು.
ಸ್ಪರ್ಧಾತ್ಮಕ ಮೊತ್ತದ ಗೆಲುವಿನ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡಕ್ಕೂ ಉತ್ತಮ ಆರಂಭ ಸಿಗಲಿಲ್ಲ. ಎರಡನೇ ಓವರ್‌ನಲ್ಲಿಯೇ ಜಸ್ಪ್ರೀತ್ ಬುಮ್ರಾ ಅಚ್ಚರಿಯ ಔಟ್‌ಸ್ವಿಂಗ್‌ನಲ್ಲಿ ರೀಜಾ ಹೆಂಡ್ರಿಕ್ಸ್ ರನ್ನು ಬಲಿ ಪಡೆದರು. ನಾಯಕ ಏಡನ್ ಮಾರ್ಕ್ರಾಮ್ ಕೂಡ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗದೆ ಅರ್ಷದೀಪ್ ಸಿಂಗ್ ಬೌಲಿಂಗ್ ನಲ್ಲಿ ಪೆವಿಲಿಯನ್ ಸೇರಿಕೊಂಡರು. ಆಗ ಕ್ವಿಂಟನ್ ಡಿ ಕಾಕ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ ತಂಡದ ಇನ್ನಿಂಗ್ಸ್ ಕೈಗೆತ್ತಿಕೊಂಡು ಪ್ರತಿದಾಳಿ ನಡೆಸಿ ತಂಡವನ್ನು 9 ನೇ ಓವರ್ ಅಂತ್ಯಕ್ಕೆ 70 ರನ್‌ಗಳ ಗಡಿ ದಾಟಿಸಿದರು. ಆದರೆ ಅಕ್ಷರ್ ಪಟೇಲ್, ಸ್ಟಬ್ಸ್ ಅವರ ಸ್ಫೋಟಕ ಇನ್ನಿಂಗ್ಸ್ ನ್ನು ಅಂತ್ಯಗೊಳಿಸಿದರು. ನಂತರ ಕ್ಲಾಸನ್ ಮತ್ತು ಡಿ ಕಾಕ್ ಜೊತೆಯಾಟ ನಡೆಸಿ ತಂಡವನ್ನು 100 ರನ್‌ಗಳ ಗಡಿ ದಾಟಿಸಿದರು. ಈ ಜೊತೆಯಾಟವು ಅಪಾಯಕಾರಿಯಾಗುವಂತೆ ತೋರುತ್ತಿತ್ತು. ಅರ್ಷದೀಪ್, ಡಿ ಕಾಕ್ ವಿಕೆಟ್ ಪಡೆಯುವ ಮೂಲಕ ಟೀಂ ಇಂಡಿಯಾಕ್ಕೆ 4ನೇ ವಿಕೆಟ್ ತಂದು ಕೊಟ್ಟರು. ಆಗ ಸ್ಫೋಟಕ ಆಟಗಾರ ಹೆನ್ರಿಚ್ ಕ್ಲಾಸೆನ್, ಟೀಂ ಇಂಡಿಯಾ ಪರ ವಾಲಿದ್ದ ತಂಡವನ್ನು ತಮ್ಮತ್ತ ತಿರುಗಿಸಿಕೊಂಡರು.

ಅವರು ಕುಲ್ದೀಪ್ ಯಾದವ್ ಅವರ ಓವರ್‌ನಲ್ಲಿ 14 ರನ್ ಗಳಿಸಿದರು. ನಂತರದ ಅಕ್ಷರ್ ಪಟೇಲ್ ಮೇಲೆ 2 ಸಿಕ್ಸರ್ ಮತ್ತು 2 ಬೌಂಡರಿಗಳನ್ನು ಹೊಡೆಯುವ ಮೂಲಕ 24 ರನ್ ಗಳಿಸಿದರು. ಹೀಗಾಗಿ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಕ್ಲಾಸನ್, ದಕ್ಷಿಣ ಆಫ್ರಿಕಾಕ್ಕೆ ಗೆಲುವು ಖಚಿತ ಎನಿಸುವಂತೆ ಮಾಡಿದರು. ಹಾರ್ದಿಕ್ 17ನೇ ಓವರ್ ಇಡೀ ಪಂದ್ಯದ ದಿಕ್ಕನೇ ಬದಲಿಸಿತು. ಈ ಹಂತದಲ್ಲಿ ಆಫ್ರಿಕಾ ಗೆಲುವಿಗೆ 24 ಎಸೆತಗಳಲ್ಲಿ 26 ರನ್‌ಗಳ ಅಗತ್ಯವಿತ್ತು. ಈ ವೇಳೆ ಹಾರ್ದಿಕ್ 17ನೇ ಓವರ್‌ನ ಮೊದಲ ಎಸೆತದಲ್ಲಿ ಕ್ಲಾಸನ್ ವಿಕೆಟ್ ಪಡೆದರು. ಆ ಓವರ್ ನಲ್ಲಿ 4 ರನ್ ನೀಡಿದರು.ನಂತರದ ಓವರ್ ನಲ್ಲಿ ಬುಮ್ರಾ ಕೇವಲ 2 ರನ್ ನೀಡಿ ಮಾರ್ಕೊ ಯಾನ್ಸನ್ರನ್ನು ಬೌಲ್ಡ್ ಮಾಡಿದರು. ಕೊನೆಯ 2 ಓವರ್‌ಗಳಲ್ಲಿ ದಕ್ಷಿಣ ಆಫ್ರಿಕಾಕ್ಕೆ 20 ರನ್ ಅಗತ್ಯವಿತ್ತು. 19ನೇ ಓವರ್ ಬೌಲ್ ಮಾಡಿದ ಅರ್ಷದೀಪ್ ಕೇವಲ 4 ರನ್ ನೀಡಿದರು. ಹೀಗಾಗಿ ಕೊನೆಯ ಓವರ್ ನಲ್ಲಿ 16 ರನ್ ಗಳ ಅಗತ್ಯವಿತ್ತು. ಹಾರ್ದಿಕ್ ಮೊದಲ ಎಸೆತದಲ್ಲಿ ಡೇವಿಡ್ ಮಿಲ್ಲರ್ ಅವರ ವಿಕೆಟ್ ಪಡೆಯುವ ಮೂಲಕ ಗೆಲುವಿನ ನಗೆ ಬೀರುವಂತೆ ಮಾಡಿದರು. ಈ ಓವರ್ ನಲ್ಲಿ ಕೇವಲ 8 ರನ್ ನೀಡಿ, ಭಾರತ ಗೆಲುವಿನ ನಗೆ ಬೀರಿತು.