ಟಿ20 ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತಿದ್ದಕ್ಕೆ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರ ಬಿದ್ದಿದ್ದ ಭಾರತೀಯ ವನಿತೆಯರು ಈಗ ಸೇಡು ತೀರಿಸಿಕೊಂಡಿದ್ದಾರೆ.
ಭಾರತ ಹಾಗೂ ನ್ಯೂಜಿಲೆಂಡ್ ಮಹಿಳಾ ತಂಡಗಳ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ಇಂದಿನಿಂದ ಆರಂಭವಾಗಿದೆ. ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ಟೀಂ ಇಂಡಿಯಾ, ಹಾಲಿ ಟಿ20 ವಿಶ್ವಕಪ್ ಚಾಂಪಿಯನ್ ತಂಡವನ್ನು ಸೋಲಿಸಿದೆ. ಭಾರತ ತಂಡ ಮೊದಲ ಪಂದ್ಯವನ್ನು ಬರೋಬ್ಬರಿ 59 ರನ್ ಗಳಿಂದ ಗೆದ್ದುಕೊಂಡಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ.
ಮೊದಲ ಏಕದಿನ ಪಂದ್ಯದಿಂದ ಹರ್ಮನ್‌ಪ್ರೀತ್ ಕೌರ್ ಹೊರಗೆ ಉಳಿದಿದ್ದ ಕಾರಮಕ್ಕೆ ಸ್ಮೃತಿ ಮಂಧಾನ ತಂಡವನ್ನು ಮುನ್ನಡೆಸಿದ್ದರು. ನಾಯಕಿ ಮಂಧಾನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಬ್ಯಾಟಿಂಗ್ ಆರಂಭಿಸಿದ ನಾಯಕಿ ಸ್ಮೃತಿ ಮಂಧಾನ ಕೇವಲ 5 ರನ್ ಗಳಿಸಿ ಔಟ್ ಆದರು. ಶೆಫಾಲಿ ವರ್ಮಾ (33) ಸಿಕ್ಕ ಉತ್ತಮ ಆರಂಭ ನೀಡಿದರು. ಯಾಸ್ತಿಕಾ ಭಾಟಿಯಾ (37), ಜೆಮಿಮಾ ರೋಡ್ರಿಗಸ್ (35), ದೀಪ್ತಿ ಶರ್ಮಾ (41) ರನ್ ಗಳಿಸಿದರು. ಇನ್ನು ಚೊಚ್ಚಲ ಪಂದ್ಯವನ್ನಾಡಿದ ತೇಜಲ್ ಹಸನ್‌ಬಿಸ್ 42 ರನ್ ಗಳಿಸಿದರು. ಪರಿಣಾಮ ಭಾರತ ತಂಡ 44.3 ಓವರ್ ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 227 ರನ್ ಗಳಿಸಿತ್ತು. ನ್ಯೂಜಿಲೆಂಡ್ ಪರ ಅಮೆಲಿಯಾ ಕಾರ್ 4 ವಿಕೆಟ್ ಪಡೆದು ಮಿಂಚಿದರು.
ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ಗೂ ಆರಂಭಿಕ ಆಘಾತ ಕಾಡಿತ್ತು. ಜಾರ್ಜಿಯಾ ಪ್ಲಿಮ್ಮರ್ (25) ತಂಡಕ್ಕೆ ವೇಗದ ಆರಂಭ ನೀಡಿದರಾದರೂ ಬೇಗನೆ ಔಟಾದರು. ನಾಯಕಿ ಸೋಫಿ ಡಿವೈನ್ ತಾವು ಮಾಡಿಕೊಂಡ ಎಡವಟ್ಟಿನಿಂದ ತಾವೇ ವಿಕೆಟ್ ಕೈಚೆಲ್ಲಿದರು. ಬ್ರೂಕ್ ಹ್ಯಾಲಿಡೆ (39) ಮತ್ತು ಮ್ಯಾಡಿ ಗ್ರೀನ್ (31) ಗಳಿಸಿದರು. ಅಮೆಲಿಯಾ ಕರ್ 25 ರನ್ ಗಳಿಸಿದರು. ಆದರೂ ಕೊನೆಗೆ ಭಾರತೀಯ ಬೌಲರ್ ಗಳ ಎದುರು ಮಂಕಾಗಿ ಸೋಲು ಒಪ್ಪಿಕೊಂಡರು.