ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೂರು ಟಿ20 ಪಂದ್ಯಗಳ ಪೈಕಿ ಮೊದಲ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿದೆ.
ಪ್ರವಾಸಿ ಭಾರತ ತಂಡ 43 ರನ್ ಗಳ ಬೃಹತ್ ಜಯ ದಾಖಲಿಸಿದೆ. ಈ ಮೂಲಕ ಟಿ20 ವಿಶ್ವಕಪ್ ಬಳಿಕ ಚುಟುಕು ಮಾದರಿಯ ತಂಡದ ನಾಯಕತ್ವವಹಿಸಿಕೊಂಡಿರುವ ಸೂರ್ಯಕುಮಾರ್ ಯಾದವ್ ಹಾಗೂ ತಂಡದ ನೂತನ ಮುಖ್ಯ ಕೋಚ್ ಆಗಿರುವ ಗೌತಮ್ ಗಂಭೀರ್ಗೆ ಗೆಲುವಿನ ಶುಭಾರಂಭ ಸಿಕ್ಕಂತಾಗಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಾರತ ತಂಡ ನಿಗದಿತ 20 ಓವರ್ಗಳಲ್ಲಿ ತಂಡ 7ವಿಕೆಟ್ ಕಳೆದುಕೊಂಡು ಬರೋಬ್ಬರಿ 213 ರನ್ ಗಳಿಸಿತು.
ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ ಉತ್ತಮ ಆರಂಭದ ಹೊರತಾಗಿಯೂ ಈ ಬೃಹತ್ ಮೊತ್ತ ಬೆನ್ನಟ್ಟುವಲ್ಲಿ ವಿಫಲವಾಯಿತು. ಅಂತಿಮವಾಗಿ ತಂಡ 20 ನೇ ಓವರ್ ನಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 170 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲು ಒಪ್ಪಿಕೊಂಡಿತು.
ಶುಭ್ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಉತ್ತಮ ಆರಂಭ ನೀಡಿದರು. ಗಿಲ್ 16 ಎಸೆತಗಳಲ್ಲಿ 34 ರನ್ ಮತ್ತು ಯಶಸ್ವಿ 21 ಎಸೆತಗಳಲ್ಲಿ 40 ರನ್ ಗಳಿಸಿದರು. ನಾಯಕ ಸೂರ್ಯಕುಮಾರ್ ಯಾದವ್ 22 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದರು. ಕೊನೆಯಲ್ಲಿ 26 ಎಸೆತಗಳಲ್ಲಿ 58 ರನ್ ಗಳಿಸಿ ಔಟಾದರು. ಅಂತಿಮವಾಗಿ ಪಂತ್ 33 ಎಸೆತಗಳಲ್ಲಿ 49 ರನ್ ಕೊಡುಗೆ ನೀಡಿದರೆ, ಅಕ್ಷರ್ ಪಟೇಲ್ ಇನಿಂಗ್ಸ್ನ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ತಂಡದ ಸ್ಕೋರ್ ನ್ನು 200ರ ಗಡಿ ದಾಟಿಸಿ 213 ರನ್ ಆಗುವಂತೆ ಮಾಡಿದರು.
ಕಠಿಣ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ ಕೂಡ ಆರಂಭದಲ್ಲಿ ಭಾರತಕ್ಕೆ ತಕ್ಕ ಉತ್ತರ ನೀಡಿತು. ಆರಂಭಿಕರಾದ ಪಾಥುಮ್ ನಿಸ್ಸಾಂಕ ಮತ್ತು ಕುಸಾಲ್ ಮೆಂಡಿಸ್ ಜೋಡಿ 52 ಎಸೆತಗಳಲ್ಲಿ 84 ರನ್ ಗಳಿಸಿದರು. ಪಾಥುಮ್ ನಿಸ್ಸಾಂಕ 4 ಸಿಕ್ಸರ್ ಮತ್ತು 7 ಬೌಂಡರಿಗಳ ಸಹಾಯದಿಂದ 79 ರನ್ ಗಳಿಸಿದರು. ನಂತರ ಶ್ರೀಲಂಕಾ ಕುಯಿಸುತ್ತ ಸಾಗಿತು. 158 ರನ್ ಗಳಿಸುವಷ್ಟರಲ್ಲಿ ನಾಲ್ಕನೇ ವಿಕೆಟ್ ಕಳೆದುಕೊಂಡಿದ್ದ ಶ್ರೀಲಂಕಾ ಆ ನಂತರ ಕೇವಲ 12 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಗಿ ಸೋಲು ಒಪ್ಪಿಕೊಂಡಿತು.