ದುಬೈ: ಪಾಕಿಸ್ತಾನ ವಿರುದ್ಧ ಹೈವೋಲ್ಟೇಜ್ ಪಂದ್ಯಕ್ಕೆ ಮೊದಲು ಭಾರತ ತಂಡದ ಆಟಗಾರರು ಸಂಪೂರ್ಣವಾಗಿ ಸಜ್ಜಾಗಿದ್ದಾರೆ. ಅದರಲ್ಲೂ ಬ್ಯಾಟಿಂಗ್ ಲಯ ಪಡೆಯಲು ಹೆಣಗಾಡುತ್ತಿರುವ ಟೀಮ್ ಇಂಡಿಯಾದ ಹಿರಿಯ ಬ್ಯಾಟರ್ ವಿರಾಟ್ ಕೊಹ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ. ಉಳಿದವರೂ 3 ಗಂಟೆ ಮೊದಲೇ ತರಬೇತಿಗೆ ಹಾಜರಾಗಿದ್ದಾರೆ.
ಕೊಹ್ಲಿ ಮಾರ್ಗದರ್ಶನದಲ್ಲೇ ಆಟಗಾರರು ಶನಿವಾರ ಅಭ್ಯಾಸ ನಡೆಸಿದ್ದು ವಿಶೇಷವಾಗಿತ್ತು. ಯುಎಇನಲ್ಲಿರುವ ಉತ್ಕೃಷ್ಟ ಬೌಲರ್‌ಗಳನ್ನು ಆಯ್ದುಕೊಂಡು ಉರಿಬಿಸಿಲನ್ನೂ ಲೆಕ್ಕಿಸದೇ ಸತತ ಮೂರು ಗಂಟೆಗೂ ಅಧಿಕ ಕೊಹ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ. ಡ್ರೈವ್ ಹೊಡೆತಗಳನ್ನು ಕೇಂದ್ರೀಕರಿಸಿ ಕೊಹ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದರು.
ಕಳೆದ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಸ್ಪಿನ್ನರ್‌ಗಳ ಮುಂದೆ ಪೇಚಾಡಿದ್ದರು. ಅವರು ಕೇವಲ ಒಂದು ಬೌಂಡರಿ ಮಾತ್ರ ಬಾರಿಸಿದ್ದರು. ಕೊಹ್ಲಿ ಕಳಪೆ ಬ್ಯಾಟಿಂಗ್ ಕುರಿತು ಅನೇಕ ಮಾಜಿ ಆಟಗಾರರು ಟೀಕೆ ವ್ಯಕ್ತಪಡಿಸಿದ್ದರು. ಎಲ್ಲ ಟೀಕೆಗಳಿಗೆ ಕೊಹ್ಲಿ ಪಾಕ್ ವಿರುದ್ಧ ಉತ್ತರ ನೀಡುವ ಸಾಧ್ಯತೆಗಳಿವೆ.
ಹಲವಾರು ಸಾಧನೆಗಳನ್ನು ಮಾಡುವ ಅವಕಾಶ
ವಿರಾಟ್ ಕೊಹ್ಲಿ(Virat Kohli)ಗೆ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ(Champions Trophy) ವಿಶೇಷ ಮೈಲುಗಲ್ಲು ನಿರ್ಮಿಸುವ ಅವಕಾಶವಿದೆ. ಅವರು ಒಟ್ಟಾರೆ 241 ಕಲೆ ಹಾಕಿದರೆ, ಚಾಂಪಿಯನ್ಸ್ ಟ್ರೋಫಿಯಲ್ಲಿ ಅತ್ಯಧಿಕ ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಸದ್ಯ ದಾಖಲೆ ವಿಂಡೀಸ್‌ನ ಮಾಜಿ ಆಟಗಾರ ಕ್ರಿಸ್ ಗೇಲ್ ಹೆಸರಿನಲ್ಲಿದೆ.
ಗೇಲ್ 2002-2013ರ ಅವಧಿಯಲ್ಲಿ 17 ಪಂದ್ಯಗಳನ್ನಾಡಿ 791 ರನ್ ಬಾರಿಸಿ ಅಗ್ರಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ 14 ಪಂದ್ಯಗಳಿಂದ 551* ರನ್ ಬಾರಿಸಿ ಸದ್ಯ 11ನೇ ಸ್ಥಾನದಲ್ಲಿದ್ದಾರೆ. ಭಾರತೀಯ ದಾಖಲೆ ಸದ್ಯ ಮಾಜಿ ಬ್ಯಾಟರ್ ಶಿಖರ್ ಧವನ್ ಹೆಸರಿನಲ್ಲಿದೆ. ಧವನ್ 10 ಪಂದ್ಯಗಳಿಂದ 701 ಗಳಿಸಿದ್ದಾರೆ. ಕೊಹ್ಲಿ 2017ರ ಆವೃತ್ತಿಯ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಅಜೇಯ 96 ರನ್ ಬಾರಿಸಿದ್ದರು.