ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಸೋಲಿನ ದವಡೆಗೆ ಸಿಲುಕಿದೆ.
2ನೇ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ತಂಡ ಸಂಪೂರ್ಣವಾಗಿ ಮೇಲುಗೈ ಸಾಧಿಸಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡವು ಕೇವಲ 180 ರನ್ ಗಳಿಗೆ ಸರ್ವಪತನ ಕಂಡಿತ್ತು. ನಂತರ ಮೊದಲ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡವು 337 ರನ್ ಗಳಿಸಿದೆ. ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡವು ಎರಡನೇ ದಿನದಾಟದಂತ್ಯಕ್ಕೆ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡು 128 ರನ್ ಗಳಿಸಿದೆ. ಹೀಗಾಗಿ ಭಾರತ ತಂಡ ಇನ್ನೂ 29 ರನ್ ಗಳ ಹಿನ್ನಡೆ ಅನುಭವಿಸಿದೆ.
ರಿಷಬ್ ಪಂತ್ ಹಾಗೂ ನಿತೀಶ್ ಕುಮಾರ್ ರೆಡ್ಡಿ ಅಜೇಯರಾಗಿ ನಾಳೆಯ ಆಟ ಉಳಿಸಿಕೊಂಡಿದ್ದಾರೆ. ಈ ಇಬ್ಬರ ಮೇಲೆ ತಂಡದ ಸೋಲು ಗೆಲುವು ನಿರ್ಧಾರವಾಗಲಿದೆ. ಒಂದು ವೇಳೆ ಮೂರನೇ ದಿನದಾಟದಲ್ಲಿ ಈ ಇಬ್ಬರು ಕೂಡ ಬೇಗ ಫೆವಲಿಯನ್ ಸೇರಿದರೆ, ಭಾರತ ಸೋಲುವುದು ಖಚಿತ ಎನ್ನಬಹುದು.
ಎರಡನೇ ಇನ್ನಿಂಗ್ಸ್ನಲ್ಲಿ ಭಾರತದ ಆರಂಭವೇ ಕಳಪೆಯಾಗಿತ್ತು. ಆರಂಭಿಕ ಜೋಡಿ ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಮತ್ತೆ ವಿಫಲತೆ ಅನುಭವಿಸಿದರು. ಹೀಗಾಗಿ ಭಾರತ ತಂಡ ಆರಂಭದಿಂದಲೂ ಹೀನಾಯ ಸ್ಥಿತಿ ಆರಂಭಿಸಿತು. ಮೊದಲ ಇನ್ನಿಂಗ್ಸ್ನಲ್ಲಿ 2 ಜೀವದಾನವನ್ನು ಬಳಸಿಕೊಂಡು 37 ರನ್ ಗಳಿಸಿದ್ದ ರಾಹುಲ್, ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ ಏಳು ರನ್ ಗಳಿಗೆ ಔಟ್ ಆದರು. ಯಶಸ್ವಿ (24) ಮತ್ತು ವಿರಾಟ್ ಕೊಹ್ಲಿ (11) ರನ್ ಗಳಿಸಿ ತಮ್ಮ ಆಟ ಮುಗಿಸಿದರು.
ಶುಭಮನ್ ಗಿಲ್ ಕೂಡ ದೊಡ್ಡ ಇನ್ನಿಂಗ್ಸ್ ಆಡುವಲ್ಲಿ ವಿಫಲರಾಗಿ 28 ರನ್ ಗಳಿಸಿದರು. ನಾಯಕ ರೋಹಿತ್ ಮೊದಲ ಇನ್ನಿಂಗ್ಸ್ ನಂತೆ ಬಂದಷ್ಟೇ ವೇಗವಾಗಿ ಫೆವಲಿಯನ್ ಸೇರಿದರು. ಹೀಗಾಗಿ ಭಾರತ ತಂಡವು ಸೋಲಿನ ಸುಳಿಗೆ ಸಿಲುಕಿದೆ ಎನ್ನಬಹುದು.