ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೂರನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತೀಯ ಮಹಿಳಾ ತಂಡವು ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಬರೋಬ್ಬರಿ 217 ರನ್ ಗಳಿಸಿದೆ.
ಈ ಮೂಲಕ ವಿಂಡೀಸ್ ಗೆಲುವಿಗೆ 218 ರನ್ಗಳ ಗುರಿ ನೀಡಿದೆ. ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಹಾಗೂ ರಿಚಾ ಘೋಷ್ ಸಿಡಿಸಿದ ಸಿಡಿಲಬ್ಬರದ ಅರ್ಧಶತಕದ ಪರಿಣಾಮ ಭಾರತ ತಂಡ ಈ ಸ್ಕೋರ್ ಮಾಡಿತು. ವಿಂಡೀಸ್ ಬೌಲರ್ಗಳನ್ನು ಚೆಂಡಾಡಿ ಕ್ರಮವಾಗಿ 77 ಹಾಗೂ 54 ರನ್ಗಳ ಕಾಣಿಕೆ ನೀಡಿದರು.
ಟಾಸ್ ಗೆದ್ದಿದ್ದ ವೆಸ್ಟ್ ಇಂಡೀಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಓವರ್ನ ಎರಡನೇ ಎಸೆತದಲ್ಲೇ ಆರಂಭಿಕ ಆಟಗಾರ್ತಿ ಉಮಾ ಛೆಟ್ರಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಸ್ಮೃತಿ ಮಂಧಾನ ಹಾಗೂ ಜೆಮಿಮಾ ರಾಡ್ರಿಗಸ್ 2ನೇ ವಿಕೆಟ್ಗೆ 98 ರನ್ ಗಳ ಕೊಡುಗೆ ನೀಡಿದರು. ಹೀಗಾಗಿ ಭಾರತ ತಂಡ 10 ಓವರ್ಗಳಲ್ಲೇ 99 ರನ್ ಗಳಿಸಿತ್ತು. ಆರಂಭದಿಂದಲೂ ಹೊಡಿಬಡಿ ಆಟಕ್ಕೆ ಮುಂದಾದ ಸ್ಮೃತಿ ಕೇವಲ 27 ಎಸೆತಗಳಲ್ಲಿ ತಮ್ಮ 30ನೇ ಅರ್ಧಶತಕ ಪೂರೈಸಿದರು.
ಈ ಸರಣಿಯಲ್ಲಿ ಸ್ಮೃತಿ ಅವರ ಮೂರನೇ ಅರ್ಧಶತಕ ಕೂಡ ಆಗಿತ್ತು. ಅಂತಿಮವಾಗಿ ತಮ್ಮ ಇನ್ನಿಂಗ್ಸ್ನಲ್ಲಿ 47 ಎಸೆತಗಳನ್ನು ಎದುರಿಸಿದ ಸ್ಮೃತಿ 13 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 77 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಜೆಮಿಮಾ ಕೂಡ 39 ರನ್ಗಳಿಗೆ ಇನ್ನಿಂಗ್ಸ್ ಅಂತ್ಯಗೊಳಿಸಿಕೊಂಡರು.
ರಾಘ್ವಿ ಹಾಗೂ ರಿಚಾ ಘೋಷ್ ಮೈದಾನದಲ್ಲಿ ಬೌಂಡರಿಗಳ ಮಳೆಗರೆದರು. ಒಂದೆಡೆ ರಿಚಾ ವಿಂಡೀಸ್ ಬೌಲರ್ಗಳ ಬೆವರಳಿಸಿದರೆ, ಇನ್ನೊಂದೆಡೆ ರಾಘ್ವಿ, ರಿಚಾಗೆ ಉತ್ತಮ ಸಾಥ್ ನೀಡಿದರು. ಅಜೇಯರಾಗಿ ಉಳಿದ ರಾಘ್ವಿ 22 ಎಸೆತಗಳಲ್ಲಿ 31 ರನ್ ಗಳಿಸಿದರು. ರಿಚಾ ಘೋಷ್ 21 ಎಸೆತಗಳಲ್ಲಿ 3 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್ ಸಹಿತ 54 ರನ್ ಬಾರಿಸಿ ಕೊನೆಯ ಓವರ್ ನಲ್ಲಿ ಒಟ್ ಆದರು.