ಒಟ್ಟಾವಾ: ಕೆನಡಾದ(Canada) ರಾಜಧಾನಿ ಒಟ್ಟಾವಾದಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿರುವ ರಾಕ್‌ಲ್ಯಾಂಡ್ ಎಂಬ ಪಟ್ಟಣದಲ್ಲಿ ಭಾರತೀಯ ನಾಗರಿಕರೊಬ್ಬರನ್ನು ದುಷ್ಕರ್ಮಿಗಳು ಚೂರಿಯಿಂದ ಇರಿದು ಹತ್ಯೆಗೈದ ಘಟನೆ ನಡೆದಿದೆ. ಘಟನೆ ಸಂಬಂಧ ಶಂಕಿತನೊಬ್ಬನನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ ಎಂದು ಭಾರತೀಯ ರಾಯಭಾರ ಕಚೇರಿ ದೃಢಪಡಿಸಿದೆ. ಈ ದುರ್ಘಟನೆಯಿಂದ ಆಘಾತಗೊಂಡಿರುವ ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿರುವ ಭಾರತದ ರಾಯಭಾರ ಕಚೇರಿ, ಸ್ಥಳೀಯ ಸಮುದಾಯ ಸಂಘದ ಮೂಲಕ ಸಂತ್ರಸ್ತನ ಕುಟುಂಬಕ್ಕೆ ಎಲ್ಲ ರೀತಿಯ ಸಹಾಯವನ್ನು ಒದಗಿಸುವುದಾಗಿ ತಿಳಿಸಿದೆ.
ರಾಕ್‌ಲ್ಯಾಂಡ್‌ನ ಲಾಲೊಂಡೆ ಸ್ಟ್ರೀಟ್ ಸಮೀಪದಲ್ಲಿ ಈ ಘಟನೆ ನಡೆದಿದೆ ಎಂದು ಒಂಟಾರಿಯೊ ಪ್ರಾಂತೀಯ ಪೊಲೀಸರು ತಿಳಿಸಿದ್ದಾರೆ. ಮೃತ ಭಾರತೀಯನ ಗುರುತು ಮತ್ತು ಘಟನೆಯ ಸಂಪೂರ್ಣ ವಿವರಗಳು ಇನ್ನೂ ಬಹಿರಂಗಗೊಂಡಿಲ್ಲ. ಅಲ್ಲದೇ, ಈ ಕೃತ್ಯಕ್ಕೆ ಕಾರಣವೇನಿರಬಹುದು ಎಂಬುದೂ ಗೊತ್ತಾಗಿಲ್ಲ. ತನಿಖೆಯ ಬಳಿಕವೇ ಹೆಚ್ಚಿನ ಮಾಹಿತಿ ತಿಳಿದುಬರಲಿದೆ ಎಂದು ಪೊಲೀಸರು ಹೇಳಿದ್ದಾರೆ.
ಭಾರತೀಯ ರಾಯಭಾರ ಕಚೇರಿಯ ಪ್ರತಿಕ್ರಿಯೆ
ಕೆನಡಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಕಟಣೆಯೊಂದನ್ನು ಹೊರಡಿಸಿದ್ದು, “ರಾಕ್‌ಲ್ಯಾಂಡ್‌ನಲ್ಲಿ ಭಾರತೀಯ ವ್ಯಕ್ತಿಯೊಬ್ಬರು ಚಾಕು ಇರಿತರಿಂದ ಮೃತಪಟ್ಟಿದ್ದಾರೆ. ಈ ಘಟನೆಯಿಂದ ನಾವು ತೀವ್ರವಾಗಿ ದುಃಖಿತರಾಗಿದ್ದೇವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯ ಭಾರತೀಯ ಸಮುದಾಯ ಸಂಘದ ಮೂಲಕ ನಾವು ಮೃತರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದು, ಅವರಿಗೆ ಸಾಧ್ಯವಾದ ಎಲ್ಲ ಸಹಾಯವನ್ನು ಒದಗಿಸುತ್ತಿದ್ದೇವೆ” ಎಂದು ತಿಳಿಸಿದೆ. ಈ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಪೊಲೀಸರೊಂದಿಗೆ ಸಂಪರ್ಕದಲ್ಲಿರುವುದಾಗಿಯೂ ರಾಯಭಾರ ಕಚೇರಿ ಹೇಳಿದೆ.
ಇದನ್ನೂ ಓದಿ: Infiltration Attempt : ಜಮ್ಮು ಅಂತಾರಾಷ್ಟ್ರೀಯ ಗಡಿಯಲ್ಲಿ ಬಿಎಸ್ಎಫ್‌ನಿಂದ ಪಾಕಿಸ್ತಾನಿ ನುಸುಳುಕೋರನ ಹತ್ಯೆ
ಆದರೆ, ಈ ಘಟನೆಯು ಭಾರತೀಯ ಸಮುದಾಯದಲ್ಲಿ ಭಾರೀ ಆತಂಕವನ್ನು ಸೃಷ್ಟಿಸಿದೆ. ವಿಶೇಷವಾಗಿ ಕೆನಡಾದಲ್ಲಿ ಭಾರತೀಯರ ಮೇಲಿನ ದಾಳಿಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವುದು ಕೂಡ ಕಳವಳಕ್ಕೆ ಕಾರಣವಾಗಿದೆ.
ಕೆನಡಾದಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಭಾರತೀಯ ನಾಗರಿಕರು ಮತ್ತು ಭಾರತ ಮೂಲದ ವಿದ್ಯಾರ್ಥಿಗಳ ಮೇಲೆ ಹಲವು ದಾಳಿಗಳು ನಡೆದಿವೆ. ಡಿಸೆಂಬರ್ 2024 ರಲ್ಲಿ ಸಾರ್ನಿಯಾದಲ್ಲಿ 22 ವರ್ಷದ ಭಾರತೀಯ ವಿದ್ಯಾರ್ಥಿ ಗುರಾಸಿಸ್ ಸಿಂಗ್ ನನ್ನು ಸಹಪಾಠಿಯೇ ಚಾಕುವಿನಿಂದ ಇರಿದು ಕೊಲೆಗೈದಿದ್ದ. ಇಂತಹ ಘಟನೆಗಳು ಭಾರತೀಯ ಸಮುದಾಯದಲ್ಲಿ ಭದ್ರತೆ ಮತ್ತು ಸುರಕ್ಷತೆಯ ಬಗ್ಗೆ ಪ್ರಶ್ನೆಯೇಳುವಂತೆ ಮಾಡಿವೆ.