ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಆಟಗಾರರು ವಿಫಲರಾಗುತ್ತಿದ್ದರೆ, ದೇಶೀಯ ಕ್ರಿಕೆಟ್ ನಲ್ಲಿ ಕೆಲವರು ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಯಶ್ ವರ್ಧನ್ ದಲಾಲ್ ಬರೋಬ್ಬರಿ 426 ರನ್ ಗಳಿಸಿದ್ದಾರೆ.
ರಣಜಿ ಟ್ರೋಫಿಯೊಂದಿಗೆ 23 ವರ್ಷದೊಳಗಿನವರ ಕರ್ನಲ್ ಸಿಕೆ ನಾಯುಡು ಟ್ರೋಫಿಯಲ್ಲಿ ಹರಿಯಾಣ ತಂಡದ ಸ್ಟಾರ್ ಬ್ಯಾಟರ್ ಯಶ್ವರ್ಧನ್ ದಲಾಲ್ 400 ರ ಗಡಿ ದಾಟಿ ಇತಿಹಾಸ ಬರೆದಿದ್ದಾರೆ. ಈ ರನ್ ಗಳಿಸಲು ಕೇವಲ 451 ಎಸೆತ ಎದುರಿಸಿದ್ದಾರೆ.
ಸಿಕೆ ನಾಯುಡು ಟ್ರೋಫಿಯಲ್ಲಿ ಹರಿಯಾಣ ಮತ್ತು ಮುಂಬೈ ತಂಡಗಳು ಮುಖಾಮುಖಿಯಾಗಿದ್ದು, ಮೊದಲು ಬ್ಯಾಟಿಂಗ್ ಮಾಡುತ್ತಿರುವ ಹರಿಯಾಣ ಬೃಹತ್ ಮೊತ್ತ ಗಳಿಸಿದೆ. ಆರಂಭಿಕ ಜೋಡಿ ಅರ್ಶ್ ರಂಗ ಮತ್ತು ಯಶ್ವರ್ಧನ್ ದಲಾಲ್ ದಾಖಲೆಯ ಇನ್ನಿಂಗ್ಸ್ ಆಡಿದ್ದಾರೆ. ಈ ಜೋಡಿ ಮೊದಲ ವಿಕೆಟ್ ಗೆ 410 ರನ್ ಗಳ ಕಾಣಿಕೆ ನೀಡಿದ್ದಾರೆ. ಎರಡನೇ ದಿನ ಆರ್ಶ್ ರಂಗ 151 ರನ್ ಗಳಿಸಿ ಔಟಾದರೆ, ದಲಾಲ್ ದಾಖಲೆ ಬರೆದಿದ್ದಾರೆ.
ಈ ಟೂರ್ನಿಯ ಅತಿ ದೊಡ್ಡ ಸ್ಕೋರ್‌ಗಳಲ್ಲಿ ಒಂದಾಗಿದೆ. ದಲಾಲ್ ಅವರ ಈ ಇನ್ನಿಂಗ್ಸ್ ಆಧಾರದ ಮೇಲೆ ಹರಿಯಾಣ ತಂಡ 700ಕ್ಕೂ ಹೆಚ್ಚು ರನ್ ಗಳಿಸಿದೆ. ಎರಡನೇ ದಿನದಾಟದಂತ್ಯಕ್ಕೆ ಹರಿಯಾಣ ತಂಡ 8 ವಿಕೆಟ್ ಕಳೆದುಕೊಂಡು 732 ರನ್ ಗಳಿಸಿದ್ದು, ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿಲ್ಲ. ತಂಡದ ಪರ ಅಜೇಯರಾಗಿ ಉಳಿದಿರುವ ಯಶ್ವರ್ಧನ್ ದಲಾಲ್ 463 ಎಸೆತಗಳಲ್ಲಿ 46 ಬೌಂಡರಿ ಹಾಗೂ 12 ಸಿಕ್ಸರ್ ಸಿಡಿಸುವುದರ ಮೂಲಕ ಬರೋಬ್ಬರಿ 426 ರನ್ ಗಳಿಸಿದ್ದಾರೆ.