ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಲ್ಲಿ ಕಂಚು ಗೆಲ್ಲುವುದರ ಮೂಲಕ ಭಾರತೀಯ ಆಟಗಾರ ಇತಿಹಾಸ ನಿರ್ಮಿಸಿದ್ದಾರೆ.
ಭಾರತೀಯ ಆಟಗಾರ ಕಪಿಲ್ ಪರ್ಮಾರ್ ಜೂಡೋದಲ್ಲಿ ಕಂಚು ಗೆಲ್ಲುವುದರ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಕಪಿಲ್, ಬ್ರೆಜಿಲ್ ಆಟಗಾರನನ್ನು ಕೇವಲ 33 ಸೆಕೆಂಡ್ ಗಳಲ್ಲಿ ಸೋಲಿಸಿ ಕಂಚಿನ ಪದಕ ಗೆದ್ದಿರುವುದು ವಿಶೇಷ. ಈ ಮೂಲಕ ಪ್ಯಾರಾಲಿಂಪಿಕ್ ಇತಿಹಾಸದಲ್ಲಿ ಜೂಡೋದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಕಪಿಲ್ ಪಾತ್ರರಾಗಿದ್ದಾರೆ. ಈ ಮೂಲಕ ದೇಶಕ್ಕೆ 11ನೇ ಕಂಚಿನ ಪದಕ ಗೆದ್ದು ಕೊಟ್ಟಿದ್ದಾರೆ. ಇದರೊಂದಿಗೆ ಭಾರತೀಯ ಒಟ್ಟು ಪದಕಗಳ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.
ಪುರುಷರ 60 ಕೆಜಿ ಜೆ1 ವಿಭಾಗದಲ್ಲಿ ಈ ಕಂಚಿನ ಪದಕ ಗೆದ್ದಿರುವ ಕಪಿಲ್, ಈ ವಿಭಾಗದಲ್ಲಿ ವಿಶ್ವ ನಂಬರ್-1 ರ್ಯಾಂಕಿಂಗ್ ಹೊಂದಿದ್ದಾರೆ. ಗುರುವಾರ ಆಗಸ್ಟ್ 5 ರಂದು ನಡೆದ ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ ವೆನೆಜುವೆಲಾದ ಮಾರ್ಕೋಸ್ ಬ್ಲಾಂಕೊ ಅವರನ್ನು 10-0 ಅಂತರದಿಂದ ಸೋಲಿಸುವ ಮೂಲಕ ಸೆಮಿಫೈನಲ್ ತಲುಪಿದ್ದರು. ಆದರೆ, ಫೈನಲ್ ತಲುಪುವ ಭರವಸೆ ಈಡೇರಲಿಲ್ಲ. ಇರಾನ್ ಅಥ್ಲೀಟ್ ವಿರುದ್ಧ ಸೋಲನ್ನು ಎದುರಿಸಬೇಕಾಯಿತು. ಸೆಮಿಫೈನಲ್‌ನಲ್ಲಿ ಇರಾನ್‌ನ ಜೂಡೋ ಪಟು ಬನಿತಾಬಾ ಖೋರಮ್ ಕಪಿಲ್ ಅವರನ್ನು 10-0 ಅಂತರದಿಂದ ಸೋಲಿಸಿ, ಕಂಚಿನ ಪದಕಕ್ಕೆ ಕೊರಳೊಡ್ಡಿದರು.
2017 ರಲ್ಲಿ ಜೂಡೋ ಪ್ರವೇಶಿಸಿದ ಕಪಿಲ್, ಪ್ಯಾರಾಲಿಂಪಿಕ್ಸ್ ಗೆ ಅರ್ಹತೆ ಪಡೆದ ಭಾರತದ ಮೊದಲ ದೃಷ್ಟಿಹೀನ ಜೂಡೋ ಪಟು ಎನಿಸಿಕೊಂಡಿದ್ದಾರೆ. ಅಲ್ಲದೇ, ಪದಕವನ್ನೂ ಗೆದ್ದಿದ್ದಾರೆ. ಕಳೆದ ವರ್ಷ ಹ್ಯಾಂಗ್‌ಝೌನಲ್ಲಿ ನಡೆದ ಪ್ಯಾರಾ ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. IBSA ಜೂಡೋ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ನಂತರ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಕಂಚು ಗೆದ್ದಿದ್ದರು.ಈಗ ಪ್ಯಾರಾಲಿಂಪಿಕ್ಸ್ ನಲ್ಲಿ ಕಂಚು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.