ಲಂಡನ್: ಭಾರತೀಯ ಮೂಲದ ಕಾನೂನು ಪದವೀಧರೆ ಕೃಶಾಂಗಿ ಮೆಶ್ರಾಮ್, ತಮ್ಮ 21ನೇ ವಯಸ್ಸಿನಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್‌ನ ಅತೀ ಕಿರಿಯ ವಯಸ್ಸಿನ ‘ಸಾಲಿಸಿಟರ್’ ಆಗಿ ನೇಮಕಗೊಂಡಿದ್ದಾರೆ. ಈ ಮೂಲಕ ಅವರು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಸಾಧಾರಣ ಶೈಕ್ಷಣಿಕ ಪಯಣದ ಮೂಲಕ ಈ ಮೈಲಿಗಲ್ಲು ತಲುಪಿರುವ ಅವರು, ಜಗತ್ತಿನಾದ್ಯಂತ ಯುವಜನರಿಗೆ ಸ್ಫೂರ್ತಿಯಾಗಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಜನಿಸಿ, ಅಲ್ಲಿನ ಇಸ್ಕಾನ್ ಮಾಯಾಪುರ ಸಮುದಾಯದಲ್ಲಿ ಬೆಳೆದ ಕೃಶಾಂಗಿ ಅವರು, ತಮ್ಮ 15ನೇ ವಯಸ್ಸಿನಲ್ಲಿಯೇ ಮಾಯಾಪುರದ ಅಂತರರಾಷ್ಟ್ರೀಯ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದ್ದರು. ಬಳಿಕ, ಬ್ರಿಟನ್‌ಮ ಮಿಲ್ಟನ್ ಕೀನ್ಸ್‌ನಲ್ಲಿರುವ ‘ದಿ ಓಪನ್ ಯೂನಿವರ್ಸಿಟಿ’ (The Open University) ಯಲ್ಲಿ ಕಾನೂನು ಪದವಿ ಅಧ್ಯಯನಕ್ಕೆ ಪ್ರವೇಶ ಪಡೆದರು. ಕೇವಲ ಮೂರು ವರ್ಷಗಳಲ್ಲಿ ತಮ್ಮ ಅಧ್ಯಯನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅವರು, ತಮ್ಮ 18ನೇ ವಯಸ್ಸಿಗೆ ಪ್ರಥಮ ದರ್ಜೆಯ ಗೌರವ ಪದವಿಯೊಂದಿಗೆ (First Class Honours Degree) ಪದವಿ ಪಡೆದರು. ಈ ಮೂಲಕ, ‘ದಿ ಓಪನ್ ಯೂನಿವರ್ಸಿಟಿ’ಯ ಇತಿಹಾಸದಲ್ಲಿಯೇ ಅತೀ ಕಿರಿಯ ವಯಸ್ಸಿನ ಕಾನೂನು ಪದವೀಧರೆ ಎಂಬ ಹೆಗ್ಗಳಿಕೆಗೂ ಕೃಶಾಂಗಿ ಪಾತ್ರರಾದರು.

ತಮ್ಮ ಈ ಸಾಧನೆಯ ಬಗ್ಗೆ ಮಾತನಾಡಿದ ಕೃಶಾಂಗಿ, “ನನ್ನ 15ನೇ ವಯಸ್ಸಿನಲ್ಲಿಯೇ ಕಾನೂನು ಅಧ್ಯಯನವನ್ನು ಆರಂಭಿಸಲು ಅವಕಾಶ ನೀಡಿದ ‘ದಿ ಓಪನ್ ಯೂನಿವರ್ಸಿಟಿ’ಗೆ ನಾನು ಸದಾ ಆಭಾರಿಯಾಗಿರುತ್ತೇನೆ. ನನ್ನ ಅಧ್ಯಯನದ ಸಮಯದಲ್ಲಿ, ನನ್ನ ಕಾನೂನು ವೃತ್ತಿಜೀವನಕ್ಕೆ ಶೈಕ್ಷಣಿಕ ಅಡಿಪಾಯವನ್ನು ಹಾಕಿದ್ದಲ್ಲದೆ, ಕಾನೂನಿನ ಬಗ್ಗೆ ಆಳವಾದ ಮತ್ತು ಶಾಶ್ವತವಾದ ಉತ್ಸಾಹವನ್ನು ನಾನೂ ಅಲ್ಲೇ ಕಂಡುಕೊಂಡೆ” ಎಂದು ಕೃತಜ್ಞತೆ ಸಲ್ಲಿಸಿದ್ದಾರೆ. ಅವರು ವ್ಯಾಸಂಗ ಮಾಡಿರುವ ವಿಶ್ವವಿದ್ಯಾಲಯವು ಕೂಡ “ಕಾನೂನು ಪದವೀಧರೆ ಕೃಶಾಂಗಿ ಮತ್ತೊಮ್ಮೆ ಇತಿಹಾಸ ನಿರ್ಮಿಸಿದ್ದಾರೆ” ಎಂಬ ಶೀರ್ಷಿಕೆಯಡಿ ಅವರ ಸಾಧನೆಯನ್ನು ಶ್ಲಾಘಿಸಿದೆ.
2022ರಲ್ಲಿ, ಪದವಿ ಮುಗಿದ ನಂತರ ಅವರು ಅಂತರರಾಷ್ಟ್ರೀಯ ಕಾನೂನು ಸಂಸ್ಥೆಯೊಂದರಲ್ಲಿ ಉದ್ಯೋಗ ಗಿಟ್ಟಿಸಿಕೊಂಡರು. ಇದರ ಜೊತೆಗೆ, ಸಿಂಗಾಪುರದಲ್ಲಿ ವೃತ್ತಿ ಅನುಭವವನ್ನು ಸಹ ಪಡೆದಿದ್ದಾರೆ. ಪ್ರಸ್ತುತ ಯುಎಇಯಲ್ಲಿ ನೆಲೆಸಿರುವ ಅವರು, ಬ್ರಿಟನ್ ಮತ್ತು ಯುಎಇಯಲ್ಲಿ ಹೊಸ ಕಾನೂನು ಅವಕಾಶಗಳನ್ನು ಅನ್ವೇಷಿಸುತ್ತಿದ್ದಾರೆ.
ಫಿನ್ಟೆಕ್, ಬ್ಲಾಕ್ಚೈನ್, ಕೃತಕ ಬುದ್ಧಿಮತ್ತೆ (AI) ಹಾಗೂ ವಿಲ್ ಮತ್ತು ಪ್ರೊಬೇಟ್‌ನಂತಹ ಖಾಸಗಿ ಗ್ರಾಹಕ ಸೇವೆಗಳಂತಹ ಆಧುನಿಕ ಕಾನೂನು ಕ್ಷೇತ್ರಗಳಲ್ಲಿ ಅವರಿಗೆ ವಿಶೇಷ ಆಸಕ್ತಿ ಇದೆ. ಭವಿಷ್ಯದಲ್ಲಿ ಬ್ರಿಟನ್ ಅಥವಾ ಯುಎಇಯ ಪ್ರಮುಖ ಕಾನೂನು ಸಂಸ್ಥೆಗಳೊಂದಿಗೆ ಕೆಲಸ ಮಾಡುವ ಗುರಿ ಹೊಂದಿದ್ದು, ಉದಯೋನ್ಮುಖ ಡಿಜಿಟಲ್ ತಂತ್ರಜ್ಞಾನಗಳು ಮತ್ತು ಗ್ರಾಹಕ ಕೇಂದ್ರಿತ ಕಾನೂನು ಸೇವೆಗಳಲ್ಲಿ ಪರಿಣತಿ ಹೊಂದುವ ಮಹತ್ವಾಕಾಂಕ್ಷೆಯನ್ನೂ ಇಟ್ಟುಕೊಂಡಿದ್ದಾರೆ.



















