ವಾಷಿಂಗ್ಟನ್: ಅಮೆರಿಕದಲ್ಲಿ ಭಾರತೀಯ ಮೂಲದವರ ಹತ್ಯೆ ಸರಣಿ ಮುಂದುವರಿದಿದೆ. ಆಘಾತಕಾರಿ ಘಟನೆಯೊಂದರಲ್ಲಿ, ಅಮೆರಿಕದ ವರ್ಜೀನಿಯಾದ ಅಂಗಡಿಯೊಂದರೊಳಗೆ ಭಾರತೀಯ ಮೂಲದ 24 ವರ್ಷದ ಯುವತಿ ಮತ್ತು ಆಕೆಯ 56 ವರ್ಷದ ತಂದೆಯನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದಾರೆ.
ಅಕೊಮ್ಯಾಕ್ ಕೌಂಟಿಯಲ್ಲಿ ಈ ಘಟನೆ (Double Murder) ನಡೆದಿದ್ದು, ಅಂಗಡಿ ತೆರೆದ ಸ್ವಲ್ಪ ಸಮಯದಲ್ಲೇ ಗುಂಡಿನ ದಾಳಿ ನಡೆದಿದೆ. ಅವಳಿ ಕೊಲೆಗೆ ಸಂಬಂಧಿಸಿ ಪೊಲೀಸರು ಜಾರ್ಜ್ ಫ್ರೇಜಿಯರ್ ಡೆವೊನ್ ವಾರ್ಟನ್ (44) ಎಂಬಾತನನ್ನು ಬಂಧಿಸಿದ್ದಾರೆ. ವರದಿಗಳ ಪ್ರಕಾರ, ಆರೋಪಿಯು ಮುಂಜಾನೆ ಮದ್ಯ ಖರೀದಿಸಲೆಂದು ಅಂಗಡಿಗೆ ಬಂದಿದ್ದ. ರಾತ್ರಿ ಹೊತ್ತು ಅಂಗಡಿಯನ್ನು ಮುಚ್ಚಿದ್ದಿದ್ದು ಏಕೆ ಎಂದು ಪ್ರಶ್ನೆ ಕೇಳಲಾರಂಭಿಸಿದ. ಅದಕ್ಕೆ ಉತ್ತರಿಸುವಷ್ಟರಲ್ಲೇ ಆತ ಏಕಾಏಕಿ ತಂದೆ-ಮಗಳ ಮೇಲೆ ಗುಂಡಿನ ಮಳೆಗರೆದಿದ್ದಾನೆ. ಈ ವೇಳೆ ಪ್ರದೀಪ್ ಪಟೇಲ್ (56) ಸ್ಥಳದಲ್ಲೇ ಮೃತಪಟ್ಟರೆ, ಅವರ ಮಗಳು ಊರ್ಮಿ(24) ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಪ್ರದೀಪ್ ಪಟೇಲ್, ಅವರ ಪತ್ನಿ ಹನ್ಸಾಬೆನ್ ಮತ್ತು ಮಗಳು ಉರ್ಮಿ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯವರು. ಆರು ವರ್ಷಗಳ ಹಿಂದೆ ಅವರು ಅಮೆರಿಕಕ್ಕೆ ಆಗಮಸಿದ್ದರು. ಅವರು ತಮ್ಮ ಸಂಬಂಧಿ ಪರೇಶ್ ಪಟೇಲ್ ಒಡೆತನದ ಕನ್ವೀನಿಯನ್ಸ್ ಸ್ಟೋರ್ ವೊಂದರಲ್ಲಿ ಕೆಲಸ ಮಾಡುತ್ತಿದ್ದರು.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಪರೇಶ್ ಪಟೇಲ್, “ದುಷ್ಕರ್ಮಿಗಳ ಅಟ್ಟಹಾಸಕ್ಕೆ ನನ್ನ ಕುಟುಂಬದ ಇಬ್ಬರು ಸದಸ್ಯರು ಬಲಿಪಶುಗಳಾದರು” ಎಂದಿದ್ದಾರೆ. “ನನ್ನ ಸೋದರಸಂಬಂಧಿಯ ಪತ್ನಿ ಮತ್ತು ಅವಳ ತಂದೆ ಇಂದು ಬೆಳಿಗ್ಗೆ ಅಂಗಡಿಯಲ್ಲಿ ಎಂದಿನಂತೆ ಕೆಲಸ ಮಾಡುತ್ತಿದ್ದರು. ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಅಲ್ಲಿಗೆ ಬಂದು ಗುಂಡು ಹಾರಿಸಿ ಅವರನ್ನು ಕೊಂದಿದ್ದಾನೆ. ಕಾರಣ ಕೂಡ ತಿಳಿದಿಲ್ಲ” ಎಂದಿದ್ದಾರೆ. ಪ್ರದೀಪ್ ಪಟೇಲ್ ಮತ್ತು ಹನ್ಸಾಬೆನ್ ದಂಪತಿಗೆ ಇನ್ನೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಒಬ್ಬರು ಕೆನಡಾದಲ್ಲಿ ವಾಸಿಸುತ್ತಿದ್ದರೆ, ಇನ್ನೊಬ್ಬರು ಅಹಮದಾಬಾದ್ ನಿವಾಸಿಯಾಗಿದ್ದಾರೆ.
ಈ ದುರಂತವು ಗುಜರಾತ್‌ನ ಮೆಹ್ಸಾನಾದಲ್ಲಿರುವ ಪಟೇಲ್ ಅವರ ಸಂಬಂಧಿಕರನ್ನು ಬೆಚ್ಚಿಬೀಳಿಸಿದೆ. ಪ್ರದೀಪ್ ಪಟೇಲ್ ಅವರು ಸುಮಾರು 6-7 ವರ್ಷಗಳ ಹಿಂದೆ ಅಮೆರಿಕಕ್ಕೆ ಹೋಗಿದ್ದರು. ಸ್ಥಳೀಯ ಮಾಧ್ಯಮ ವರದಿಗಳು ಮತ್ತು ವೈರಲ್ ವೀಡಿಯೋದಿಂದಾಗಿ ನಮಗೆ ಅವರ ಕೊಲೆ ವಿಚಾರ ತಿಳಿದುಬಂತು ಎಂದು ಪ್ರದೀಪ್ ಅವರ ಚಿಕ್ಕಪ್ಪ ಚಂದು ಪಟೇಲ್ ಹೇಳಿದ್ದಾರೆ. ಈ ಜೋಡಿ ಕೊಲೆಯು ಅಮೆರಿಕದಲ್ಲಿರುವ ಭಾರತೀಯ ಸಮುದಾಯವನ್ನೂ ಬೆಚ್ಚಿಬೀಳಿಸಿದೆ.