ಕ್ರಿಕೆಟ್..ಈ ಮೂರಕ್ಷರದ ಪದಕ್ಕಿರುವ ಆಯಂಸ್ಕಾತಿಯ ಶಕ್ತಿ ಸಹಜವಾಗಿ ಭಾರತದ ಬೇರ್ಯಾವ ಕ್ರೀಡೆಗೂ ಇಲ್ಲ ಅನ್ನಬಹುದು. ದೇಶದ ಒಂದಿಡೀ ಸಮೂಹವನ್ನೇ ತನ್ನತ್ತ ಆಕರ್ಶಿಸುವ ಚುಂಬಕ ಶಕ್ತಿಯ ಈ ಆಟ ಒಲಿದವರ ಪಾಲಿಗೆ ಚಿನ್ನದ ಸಿಂಹಾಸನವೇ ಸರಿ. ಓರ್ವ ಸರ್ವೋಚ್ಛ ಆಟಗಾರನಿಗೆ ಈ ಕ್ರಿಕೆಟ್ ನೀಡುವ ಗೌರವ, ಸಂಪತ್ತು, ವರ್ಚಸ್ಸು ದೇಶದ ಬ್ಯಾರ್ಯಾವ ಕ್ರೀಡೆಯೂ ನೀಡಲಾರದು. ಇಂತಹ ಭಾರತ ಕ್ರಿಕೆಟ್ ಇವತ್ತು ತನ್ನ ಮನ್ವಂತರದ ಕಾಲಾವಧಿಯಲ್ಲಿದೆ. ಅದರಲ್ಲೂ ಕ್ರಿಕೆಟ್ ನ ಅತ್ಯಂತ ಹಳೆಯ ಮಾದರಿ ಟೆಸ್ಟ್, ಇಂದು ಯುವ ಪೀಳಿಗೆಯ ಹೆಗಲಿಗೇರಿದೆ.
ಅನುಭವಿಗಳ ಕೊರತೆ, ಟೆಸ್ಟ್ ಲೋಕದಲ್ಲಿ ಯಾರು ಚಕ್ರಾಧಿಪತಿ
ಕೇವಲ ಐದೇ ಐದು ತಿಂಗಳು…ಈ ಐದು ತಿಂಗಳ ಅವಧಿಯಲ್ಲಿ ಭಾರತ ಕ್ರಿಕೆಟ್ ಅತ್ಯಂತ ದೊಡ್ಡ ಪಲ್ಲಟಕ್ಕೆ ಸಾಕ್ಷಿಯಾಗಿದೆ. ತಂಡದ ಮೂವರು ಸ್ಟಾರ್ ಆಟಗಾರರ ನಿವೃತ್ತಿ ತಂಡದ ಭವಿಷ್ಯದ ಮೇಲೆ ತೂಗುಗತ್ತಿ ನೇತಾಡುವಂತೆ ಮಾಡಿದೆ. ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಎಲ್ಲ ಮಾದರಿ ಕ್ರಿಕೆಟ್ ಗೆ ನಿವೃತ್ತಿ ಘೋಷಣೆಯೊಂದಿಗೆ ಆರಂಭವಾದ ಹೊರನಡೆಯುವ ಪರ್ವ ಈಗ ಕೊಹ್ಲಿವರೆಗೂ ಬಂದು ನಿಂತಿದೆ. ಟೆಸ್ಟ್ ನಾಯಕ ರೋಹಿತ್ ಶರ್ಮಾ ಕೂಡಾ ದಿಢೀರ್ ಬೆಳವಣಿಗೆಯಲ್ಲಿ ನಿವೃತ್ತಿ ಘೋಷಿಸಿದರೆ, ವಿರಾಟ್ ಕೊಹ್ಲಿ ಕೂಡ ನನ್ನಾಟವೂ ಮುಗಿಯಿತು ಎಂದಿದ್ದಾರೆ. ಅಂದು ಸಿಕೆ ನಾಯ್ಡುರಿಂದ ಆರಂಭವಾದ ಭಾರತ ಟೆಸ್ಟ್ ಕ್ರಿಕೆಟ್ ಯುಗ ಮುಂದೆ ಎತ್ತ ಸಾಗಲಿದೆ ಎನ್ನುವ ಪ್ರಶ್ನೆ ಮೂಡಿಸಿದೆ.
ಹೊಡಿ ಬಡಿ ಆಟಗಾರರಿಗೆ ಒಗ್ಗುತ್ತಾ ಟೆಸ್ಟ್ ಕ್ರಿಕೆಟ್
ಕೊಹ್ಲಿ, ವಿರಾಟ್ ರ ನಿವೃತ್ತಿಯಿಂದ ನಿಜಕ್ಕೂ ಒಂದು ಅನುಭವಿ ಪೀಳಿಗೆಯೇ ಕ್ರಿಕೆಟ್ ನಿಂದ ನಿವೃತ್ತವಾದಂತಾಗಿದೆ. ಏಕೆಂದರೆ, ಇಂದಿನ ಯುವ ಪೀಳಿಗೆ ಟಿ 20 ಫಾರ್ಮೆಟ್ ನಲ್ಲಿ ಮಿಂಚಿದವರು. ಐದು ದಿನಗಳ ಕಾಲ ಕ್ರೀಸ್ ಗೆ ಅಂಟಿಕೊಂಡು ನಿಂತು ಆಟವಾಡುವ ಸಾಮರ್ಥ್ಯ ಈ ಹೊಡಿ ಬಡಿ ದಾಂಡಿಗರಿಗಿದೆಯಾ ಎನ್ನುವುದ ಈಗಿರುವ ಪ್ರಶ್ನೆ. ಹಾಗೆ ನೋಡಿದರೆ, ಟೆಸ್ಟ್ ನಾಯಕತ್ವಕ್ಕೆ ಮೊದಲ ಆಯ್ಕೆ ಶುಭಮನ್ ಗಿಲ್ ಅಂತಲೇ ಲೆಕ್ಕಿಸಲಾಗುತ್ತಿದೆ. ಇದರ ನಡುವೆ, ವೇಗಿ ಜಸ್ಪ್ರೀತ್ ಬೂಮ್ರಾಗೆ ಪಟ್ಟ ಕಟ್ಟಿದರೆ ಒಳಿತು ಎನ್ನುವ ಗಣಿತವೊಂದಿದೆ. ಆದರೆ, ಅಚ್ಚರಿ ಆಯ್ಕೆಗಳ ರೇಸ್ ನಲ್ಲಿ ವಿಕೆಟ್ ಕೀಪರ್ ರಿಷಬ್ ಪಂತ್ ಮತ್ತು ಕನ್ನಡಿಗ ಕೆ ಎಲ್ ರಾಹುಲ್ ಕೂಡಾ ಬಿಸಿಸಿಐನ ನೀಲಿಗಣ್ಣಿನ ಹುಡುಗರ ಪಟ್ಟಿಯಲ್ಲಿದ್ದಾರೆ. ವಿಶ್ವ ಟೆಸ್ಟ್ ಕ್ರಿಕೆಟ್ ಚಾಂಪಿಯನ್ ಶಿಪ್ ನ್ನು ಮುಡಿಗೇರಿಸಿಕೊಳ್ಳಬೇಕೆನ್ನುವ ಭಾರತದ ಕನಸು ಇನ್ನಷ್ಟೇ ನನಸಾಗಬೇಕಿದೆ. ಹೀಗಾಗಿ ಈ ಯುವ ಪೀಳಿಗೆಯ ಬಿಸಿ ರಕ್ತದ ಯುವಕರು ಟೆಸ್ಟ್ ತಂಡವನ್ನು ಅದ್ಯಾವ ಮಟ್ಟಕ್ಕೆ ಕೊಂಡುಯ್ಯುತ್ತಾರೆ ಎನ್ನುವುದು ಈಗಿರುವ ದೊಡ್ಡ ಪ್ರಶ್ನೆಯಾಗಿದೆ.



















