ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲು ಕಂಡಿದ್ದು, ಬಿಸಿಸಿಐ ಬೇಸರಕ್ಕೆ ಕಾರಣವಾಗುತ್ತಿದೆ. ಹೀಗಾಗಿ ಕೋಚ್ ಬದಲಾವಣೆಗೆ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.
ಬಿಸಿಸಿಐ ಗೌತಮ್ ಗಂಭೀರ್ ಅವರ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ. ಹೀಗಾಗಿಯೇ ಮುಂಬರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಗಂಭೀರ್ ಗೆ ಮಾಡು ಇಲ್ಲವೇ ಮಡಿಯಾಗಿದೆ. ಒಂದು ವೇಳೆ ಈ ಸರಣಿಯಲ್ಲೂ ಭಾರತ ಮುಗ್ಗರಿಸಿದರೆ, ಗಂಭೀರ್ ತಲೆ ದಂಡ ಖಚಿತ ಎನ್ನಲಾಗುತ್ತಿದೆ.
ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಹೀನಾಯವಾಗಿ ಸೋತರೆ, ಭಾರತ ತಂಡದ ಕೋಚ್ ಬದಲಾಗುವುದು ಖಚಿತ. ಅಲ್ಲದೆ ಟೆಸ್ಟ್ ಹಾಗೂ ಏಕದಿನ, ಟಿ20 ತಂಡಗಳಿಗೆ ಪತ್ಯೇಕ ತರಬೇತುದಾರರನ್ನು ನೇಮಿಸಿಕೊಳ್ಳಲು ಬಿಸಿಸಿಐ ಚರ್ಚೆ ನಡೆಸುತ್ತಿದೆ ಎನ್ನಲಾಗಿದೆ.
ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಸೋತರೆ ಗೌತಮ್ ಗಂಭೀರ್ ಅವರನ್ನು ಟೆಸ್ಟ್ ತಂಡದ ಕೋಚ್ ಸ್ಥಾನದಿಂದ ಕೆಳಗಿಳಿಸುವ ಸಾಧ್ಯತೆ ಹೆಚ್ಚಿದೆ. ಮುಂಬರುವ ಚಾಂಪಿಯನ್ಸ್ ಟ್ರೋಫಿವರೆಗೆ ಅವರನ್ನು ಏಕದಿನ ತಂಡದ ಕೋಚ್ ಆಗಿ ಮುಂದುವರೆಸಬಹುದು. ಅಲ್ಲೂ ಕೂಡ ತಂಡ ಹೀನಾಯ ಪ್ರದರ್ಶನ ನೀಡಿದರೆ, ಗಂಭೀರ್ ಗೆ ತಂಡದಿಂದ ಗೇಟ್ ಪಾಸ್ ಸಿಗಬಹುದು.
ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ಟೆಸ್ಟ್ ಸರಣಿ ನ. 22 ರಿಂದ ಆರಂಭವಾಗಲಿದೆ. ಈ ಸರಣಿಯಲ್ಲಿ 5 ಟೆಸ್ಟ್ ಪಂದ್ಯಗಳು ನಡೆಯಲಿದ್ದು, ಭಾರತ ನಾಲ್ಕರಲ್ಲಿ ಗೆದ್ದರೆ ಮಾತ್ರ ಟೆಸ್ಟ್ ಚಾಂಪಿಯನ್ ಶಿಪ್ ನ ಫೈನಲ್ ತಲುಪಬಹುದು.