ಬೆಂಗಳೂರು: ಟೈರ್ ತಯಾರಕ ಕಂಪನಿ ಆಗಿರುವ ಜೆಕೆ ಟೈರ್ ಸಂಸ್ಥೆ ನೀಡುವ ಇಂಡಿಯನ್ ಕಾರ್ ಆಫ್ ದಿ ಇಯರ್ ಮತ್ತು ಇಂಡಿಯನ್ ಮೋಟಾರ್ ಸೈಕಲ್ ಆಫ್ ದಿ ಇಯರ್(Indian Motorcycle of the Year) ಪ್ರಶಸ್ತಿಯನ್ನು ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನ ಮಾಡಲಾಯಿತು. ಮಹೀಂದ್ರ ಥಾರ್ ರಾಕ್ಸ್ ಕಾರಿನ(Mahindra Thor rocks) ವಿಭಾಗದಲ್ಲಿ ಪ್ರಶಸ್ತಿ ಪಡೆದರೆ ಏಪ್ರಿಲಿಯಾ ಆರ್‌ಎಸ್ 457 ಬೈಕ್ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉದ್ಯಮದ ಪ್ರಮುಖರು, ಖ್ಯಾತ ಪತ್ರಕರ್ತರು ಮತ್ತು ಆಟೋಮೋಟಿವ್ ಉದ್ಯಮದ ಸದಸ್ಯರು ಭಾಗವಹಿಸಿದ್ದರು. ಈ ಸಮಾರಂಭವು ಐಸಿಓಟಿವೈಯ 20ನೇ ವಾರ್ಷಿಕೋತ್ಸವವಾಗಿತ್ತು. ಭಾರತೀಯ ಆಟೋಮೋಟಿವ್ ಉದ್ಯಮದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಇದಾಗಿದೆ.
ಜೆಕೆ ಟೈರ್ & ಇಂಡಸ್ಟ್ರೀಸ್ ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ರಘುಪತಿ ಸಿಂಘಾನಿಯಾ,(Dr. Raghupathi Singhania) ಐಸಿಓಟಿವೈ ವಿಭಾಗದ ಚೇರ್ ಮನ್ ಧ್ರುವ್ ಬಹಲ್, ಐಎಂಓಟಿವೈ ವಿಭಾಗದ ಚೇರ್ ಮನ್ ಕಾರ್ತಿಕ್ ವಾರೆ ಮತ್ತು ಇನ್ನಿತರ ತೀರ್ಪುಗಾರರು ಪ್ರಶಸ್ತಿ ಪ್ರದಾನ ಮಾಡಿದರು.
2025ನೇ ವರ್ಷದ 20ನೇ ಭಾರತದ ವರ್ಷದ ಕಾರು ಎಂಬ ಪ್ರಶಸ್ತಿಯನ್ನು ಮಹೀಂದ್ರ ಥಾರ್ ರಾಕ್ಸ್ ಗೆ ನೀಡಲಾಯಿತು. ಈ ವಾಹನದ ನವೀನ ಫೀಚರ್ ಗಳು, ಉತ್ತಮವಾಗಿ ರೂಪಿಸಲಾದ ಅತ್ಯಾಕರ್ಷಕ ವಿನ್ಯಾಸ ಮತ್ತು ವಿಭಾಗದಲ್ಲಿಯೇ ಉತ್ತಮವಾದ ತಂತ್ರಜ್ಞಾನವು ತೀರ್ಪುಗಾರರ ಮೆಚ್ಚುಗೆ ಗಳಿಸಿತು. ಏಪ್ರಿಲಿಯಾ ಆರ್‌ಎಸ್ 457 ಅನ್ನು ಸರ್ವಾನುಮತದಿಂದ 2025ನೇ ವರ್ಷದ 18ನೇ ಭಾರತದ ವರ್ಷದ ಮೋಟಾರ್ ಸೈಕಲ್ ಎಂಬ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಅಸಾಧಾರಣ ಕಾರ್ಯಕ್ಷಮತೆ ಮತ್ತು ಆಲ್ ರೌಂಡ್ ಸಾಮರ್ಥ್ಯದಿಂದ ಈ ಪ್ರಶಸ್ತಿ ಒಲಿದು ಬಂದಿದೆ.

ಜೆಕೆ ಟೈರ್ ಮತ್ತು ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ರಘುಪತಿ ಸಿಂಘಾನಿಯಾ ಮಾತನಾಡಿ , “ಐಸಿಓಟಿವೈ ಮತ್ತು ಐಎಂಓಟಿವೈ ಪ್ರಶಸ್ತಿಗಳು ಭಾರತದ ಅಟೋಮೊಬೈಲ್ ಕ್ಷೇತ್ರದಲ್ಲಿ ನಡೆಯುವ ಮಹತ್ವದ ಸಾಧನೆಗಳಿಗೆ ಅತ್ಯುತ್ತಮ ಪುರಾವೆಗಳಾಗಿವೆ. ಈ ಮೂಲಕ ಅಬಿವೃದ್ಧಿಗಾಗಿ ತುಡಿಯುವ ಉದ್ಯಮದ ಬದ್ಧತೆಯನ್ನು ಗೌರವಿಸಲಾಗುತ್ತದೆ. ಭಾರತೀಯ ಅಟೋಮೊಬೈಲ್ ಕ್ಷೇತ್ರವು ಅದ್ಭುತ ಅಭಿವೃದ್ಧಿಯನ್ನು ಸಾಧಿಸಿದ್ದು, ಈ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ನಾಯಕನಾಗಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿದೆ. ಈ ಪರಂಪರೆಗೆ ಸೂಕ್ತ ರೀತಿಯ ಕೊಡುಗೆ ನೀಡಲು ಮತ್ತು ಈ ಉದ್ಯಮವನ್ನು ಮುನ್ನಡೆಸುವ ಸಾಧನೆ ಮತ್ತು ಬದ್ಧತೆಯನ್ನು ಗುರುತಿಸಿ ಗೌರವಿಸಲು ನಾವು ಹೆಮ್ಮೆಪಡುತ್ತೇವೆ” ಎಂದು ಹೇಳಿದರು.
ಪ್ರೀಮಿಯಂ ಕಾರು ವಿಭಾಗ
ಭಾರತೀಯ ಮಾರುಕಟ್ಟೆಯಲ್ಲಿನ ವಿವಿಧ ಕಾರು ತಯಾರಕರ ವ್ಯಾಪಕ ಶ್ರೇಣಿಯ ಪ್ರೀಮಿಯಂ ಕಾರುಗಳ ಹೆಚ್ಚುತ್ತಿರುವ ಜನಪ್ರಿಯತೆ, ಸ್ವೀಕಾರತೆ ಮತ್ತು ಲಭ್ಯತೆಯನ್ನು ಗೌರವಿಸುವ ಸಲುವಾಗಿ ಐಸಿಓಟಿವೈ ತೀರ್ಪುಗಾರರು 2019ರಲ್ಲಿ ‘ಪ್ರೀಮಿಯಂ ಕಾರ್ ಅವಾರ್ಡ್’ ಎಂಬ ಪ್ರಶಸ್ತಿಯನ್ನು ಪರಿಚಯಿಸಿದ್ದರು. . 2025ನೇ ಸಾಲಿನ ‘ಪ್ರೀಮಿಯಂ ಕಾರ್ ಅವಾರ್ಡ್’ ಅನ್ನು ಮರ್ಸಿಡಿಸ್ ಬೆಂಜ್ ಇ ಕ್ಲಾಸ್ ಕಾರಿಗೆ ನೀಡಲಾಗಿದೆ. ನಿರಂತರವಾಗಿ ಅಭಿವೃದ್ಧಿ ಹೊಂದುತ್ತಿರುವ ಆಟೋಮೋಟಿವ್ ಕ್ಷೇತ್ರ ಮತ್ತು ಎಲೆಕ್ಟ್ರಿಕ್ ವಾಹನಗಳ ಕಡೆಗೆ ಸರ್ಕಾರವು ಹೆಚ್ಚಿಗೆ ಗಮನ ಹರಿಸಿದ್ದನ್ನು ಪರಿಗಣಿಸಿರುವ ಸಮಿತಿಯು ಎಲೆಕ್ಟ್ರಿಕ್ ವಾಹನಗಳ ತಯಾರಕರನ್ನು ಗೌರವಿಸುವ ನಿಟ್ಟಿನಲ್ಲಿ 2021ರಲ್ಲಿ ‘ಗ್ರೀನ್ ಕಾರ್ ಅವಾರ್ಡ್’ ಅನ್ನು ಪರಿಚಯಿಸಿತ್ತು. . 2025ನೇ ಸಾಲಿನ ಗ್ರೀನ್ ಕಾರ್ ಪ್ರಶಸ್ತಿಯು ಎಂಜಿ ವಿಂಡ್ಸರ್ ಎಲೆಕ್ಟ್ರಿಕ್ ಕಾರ್ ಪಾಲಾಗಿದೆ.
ದೇಶದ ಪ್ರಮುಖ ಪಬ್ಲಿಕೇಷನ್ ಗಳ 28 ಮಂದಿ ತೀರ್ಪುಗಾರರು ನಾಲ್ಕು ಪ್ರಶಸ್ತಿಗಳಿಗೆ ಆಯ್ಕೆ ಪ್ರಕ್ರಿಯೆ ನಡೆಸಿದರು. ಬೆಲೆ, ಇಂಧನ ದಕ್ಷತೆ, ವಿನ್ಯಾಸ, ಸೌಕರ್ಯ, ಸುರಕ್ಷತೆ, ಕಾರ್ಯಕ್ಷಮತೆ, ಪ್ರಾಯೋಗಿಕತೆ, ತಾಂತ್ರಿಕ ನಾವೀನ್ಯತೆ, ಕೊಟ್ಟ ಹಣಕ್ಕೆ ಮೌಲ್ಯ ಮತ್ತು ಭಾರತೀಯ ವಾತಾವರಣಗಳಿಗೆ, ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವಂತಹ ಅಂಶಗಳು ಇತ್ಯಾದಿಗಳನ್ನು ಪರಿಗಣಿಸಿ ಪ್ರತೀ ವಾಹನದ ಗುಣಲಕ್ಷಣಗಳನ್ನು ಆಳವಾಗಿ ಮೌಲ್ಯಮಾಪನ ಮಾಡುವ ಮೂಲಕ ವಿಜೇತರ ಹೆಸರನ್ನು ಆರಿಸಲಾಯಿತು.
ಈ ಕುರಿತು ಮಾತನಾಡಿರುವ ಐಸಿಓಟಿವೈ ವಿಭಾಗದ ಚೇರ್ ಮನ್ ಶ್ರೀ ಧ್ರುವ ಬಹಲ್ , “ಈ ವರ್ಷದ ಐಸಿಓಟಿವೈಯ 20ನೇ ಆವೃತ್ತಿಯನ್ನು ಆಚರಿಸಿರುವುದು ಸ್ಮರಣೀಯವಾಗಿದೆ. ಐಸಿಓಟಿವೈ ಪ್ರದಾನ ಮಾಡುವ ಐಸಿಓಟಿವೈಯ ಗ್ರೀನ್ ಕಾರ್ ಪ್ರಶಸ್ತಿ ಮತ್ತು ಐಸಿಓಟಿವೈಯ ಪ್ರೀಮಿಯಂ ಕಾರ್ ಪ್ರಶಸ್ತಿ ಇವೆರಡೂ ಭಾರತೀಯ ವಾಹನ ಉದ್ಯಮದಲ್ಲಿನ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಾಗಿವೆ. ಕಳೆದ ಎರಡು ದಶಕಗಳಲ್ಲಿ ಐಸಿಓಟಿವೈ ಉದ್ಯಮದಲ್ಲಿ ಅತ್ಯಂತ ವಿಶ್ವಾಸಾರ್ಹ ಮತ್ತು ಗೌರವಾನ್ವಿತ ಪ್ರಶಸ್ತಿ ಎಂದು ಗುರುತಿಸಿಕೊಂಡಿದೆ” ಎಂದು ಹೇಳಿದರು.
ಐಎಂಓಟಿವೈ ವಿಭಾಗದ ಪ್ರಶಸ್ತಿ ಸಮಿತಿಯ ಚೇರ್ ಮನ್ ಆದ ಶ್ರೀ ಕಾರ್ತಿಕ್ ವಾರೆ ಮಾತನಾಡಿ, “ಈ ವರ್ಷ ಐಎಂಓಟಿವೈಯ 18ನೇ ಆವೃತ್ತಿಯಾಗಿದ್ದು, ಹಿಂದಿನ ವರ್ಷಗಳಿಗಿಂತ ಈ ಸಲ ಕಠಿಣ ಸ್ಪರ್ಧೆ ಉಂಟಾಗಿತ್ತು. ಅಂತಿಮ ಹಂತ ತಲುಪಿದ್ದ ಎಲ್ಲಾ ಮೋಟಾರ್ ಸೈಕಲ್ ಗಳು ಭಾರತ ಇದುವರೆಗೆ ಕಂಡ ಕೆಲವು ಅತ್ಯುತ್ತಮ ಯಂತ್ರಗಳಲ್ಲಿ ಸ್ಥಾನ ಪಡೆಯುವಂತದ್ದಾಗಿದ್ದುವು ಎಂದು ಹೇಳಿದರು.
ಐಸಿಓಟಿವೈ 2025 ಪ್ರಶಸ್ತಿಯನ್ನು ಸ್ವೀಕರಿಸಿದ ಮಹೀಂದ್ರಾ ಲಿಮಿಟೆಡ್ ನ ಆಟೋಮೋಟಿವ್ ಸೆಕ್ಟರ್ ಸಿಇಓ ನಳಿನಿಕಾಂತ್ ಗೊಲ್ಲಗುಂಟಾ ಅವರು, “ಮಹೀಂದ್ರ ಥಾರ್ ರಾಕ್ಸ್ ಗೆ ಈ ವರ್ಷದ ಪ್ರತಿಷ್ಠಿತ ಐಸಿಓಟಿವೈ ಪ್ರಶಸ್ತಿ ನೀಡಿ ಗೌರವಿಸಿರುವುದ್ದಕ್ಕಾಗಿ ಧನ್ಯವಾದ ಹೇಳಲು ಬಯಸುತ್ತೇವೆ. ಈ ಪುರಸ್ಕಾರವು ಜಾಗತಿಕ ಮಟ್ಟದಲ್ಲಿ ಮಾನದಂಡಗಳನ್ನು ಹಾಕಿಕೊಟ್ಟ ನಮ್ಮ ವಾಹನದ ವಿನ್ಯಾಸ, ಎಂಜಿನಿಯರಿಂಗ್ ಮತ್ತು ಉತ್ಪಾದನಾ ಶ್ರೇಷ್ಠತೆಗೆ ಸಂದ ಗೌರವಾಗಿದೆ” ಎಂದು ಹೇಳಿದರು.
ಐಎಂಓಟಿವೈ 2025 ಪ್ರಶಸ್ತಿಯನ್ನು ಸ್ವೀಕರಿಸಿದ ಬಳಿಕ ಮಾತನಾಡಿದ ಪಿಯಾಜಿಯೊ ವೆಹಿಕಲ್ಸ್ ಪ್ರೈವೇಟ್ ಲಿಮಿಟೆಡ್ ನ ಎಂಡಿ ಮತ್ತು ಸಿಇಓ ಡಿಯಾಗೋ ಗ್ರಾಫಿ ಅವರು, “ಈ ವರ್ಷ ಹಲವಾರು ಅಸಾಧಾರಣ ಮೋಟಾರ್ ಸೈಕಲ್ ಗಳು ಹೊರಹೊಮ್ಮಿದ್ದು, ಏಪ್ರಿಲಿಯಾ ಆರ್‌ಎಸ್457 ಶ್ರೇಷ್ಠ ಮೋಟಾರ್ ಸೈಕ್ ಆಗಿ ಮೂಡಿ ಬಂದಿದ್ದು ಸಂತಸ ತಂದಿದೆ” ಎಂದು ಹೇಳಿದರು.
ಮರ್ಸಿಡಿಸ್ ಬೆಂಜ್ ಇಂಡಿಯಾದ ಎಂಡಿ ಮತ್ತು ಸಿಇಓ ಆಗಿರುವ ಸಂತೋಷ್ ಅಯ್ಯರ್ ಅವರು ಮಾತನಾಡಿ, “ದೊಡ್ಡದಾದ ವೀಲ್ ಬೇಸ್ ಹೊಂದಿರುವ ಇ- ಕ್ಲಾಸ್ ಭಾರತೀಯ ಐಷಾರಾಮಿ ಕಾರು ಗ್ರಾಹಕನಿಗೆ ಅತ್ಯಂತ ಆದ್ಯತೆಯ ಐಷಾರಾಮಿ ಸೆಡಾನ್ ಆಗಿ ಮೂಡಿ ಬಂದಿದೆ. ಈ ವರ್ಷದ ಪ್ರತಿಷ್ಠಿತ ಐಸಿಓಟಿವೈ ಪ್ರೀಮಿಯಂ ಕಾರ್ ಪ್ರಶಸ್ತಿಯು ಐಷಾರಾಮಿ ಕಾರು ಮಾರುಕಟ್ಟೆಯಲ್ಲಿರುವ ಲಾಂಗ್ ವೀಲ್ ಬೇಸ್ ಇ-ಕ್ಲಾಸ್ ನ ಅತ್ಯುತ್ತಮ ಕಾರ್ಯಕ್ಷಮತೆಗೆ ಉತ್ತಮ ಸಾಕ್ಷಿಯಾಗಿದೆ” ಎಂದು ಹೇಳಿದರು.
ಎಂಜಿ ಮೋಟಾರ್ ಇಂಡಿಯಾದ ಸಿಇಓ ರಾಜೀವ್ ಚಾಬಾ ಅವರು ಮಾತನಾಡಿ, “ಸರಿಯಾದ ಬೆಲೆ ಮತ್ತು ಸೂಕ್ತ ಪ್ಯಾಕೇಜಿಂಗ್ ಹೊಂದಿರುವ ಎಂಜಿ ವಿಂಡ್ಸರ್ ಕಾರು ಸರಿಯಾದ ಸಮಯದಲ್ಲಿ ಬಂದ, ಸರಿಯಾದ ಉತ್ಪನ್ನವಾಗಿದೆ. ಇದು ಖಂಡಿತವಾಗಿಯೂ ವಿಭಾಗದಲ್ಲಿ ಸಂಚಲನ ಉಂಟು ಮಾಡಿದೆ” ಎಂದು ಹೇಳಿದರು.