ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ನಡೆಯುತ್ತಿರುವ ಮೊದಲ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾಗೆ ಭಾರತೀಯ ಬೌಲರ್ ಗಳು ತಕ್ಕ ಉತ್ತರ ನೀಡಿದ್ದಾರೆ.
ಮೊದಲ ದಿನವೇ ಎರಡೂ ತಂಡಗಳು ಮೊದಲ ಇನ್ನಿಂಗ್ಸ್ ಆಡಿದ್ದು, ಇದರಲ್ಲಿ ಭಾರತ ತಂಡವು 150 ರನ್ ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಅಂತ್ಯಗೊಳಿಸಿಕೊಂಡಿದ್ದರೆ, ಆತಿಥೇಯ ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್ ನಲ್ಲಿ ಪ್ರಮುಖ 7 ವಿಕೆಟ್ ಕಳೆದುಕೊಂಡು 67 ರನ್ ಗಳಿಸಿದೆ. ಭಾರತದ ಪರ ನಾಯಕ ಜಸ್ಪ್ರೀತ್ ಬುಮ್ರಾ ಅಧಿಕ 4 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ 2 ಹಾಗೂ ಯುವ ವೇಗಿ ಹರ್ಷಿತ್ ರಾಣಾ 1 ವಿಕೆಟ್ ಪಡೆದು ಆಸ್ಟ್ರೇಲಿಯಾಗೆ ತಕ್ಕ ಉತ್ತರ ನೀಡಿದ್ದಾರೆ.
ಭಾರತವನ್ನು 150 ರನ್ಗಳಿಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾಕ್ಕೂ ಭಾರತದ ಬೌಲರ್ ಗಳು ಕಾಟ ನೀಡಿದರು. ಒಬ್ಬನೇ ಒಬ್ಬ ಆಸೀಸ್ ಬ್ಯಾಟರ್ಗೆ ಹೆಚ್ಚು ಹೊತ್ತು ಮೈದಾನದಲ್ಲಿ ನಿಲ್ಲಲು ಭಾರತೀಯ ಆಟಗಾರರು ಬಿಡಲಿಲ್ಲ. ಲಬುಶೇನ್ ಒಬ್ಬರೇ ಆಸೀಸ್ ಪರ ಅತ್ಯಧಿಕ 52 ಎಸೆತಗಳನ್ನು ಎದುರಿಸಿದರಾದರೂ ಅವರ ಬ್ಯಾಟ್ ನಿಂದ ಬಂದಿದ್ದು ಕೇವಲ 2 ರನ್ ಮಾತ್ರ. ಉಳಿದಂತೆ ಆಸ್ಟ್ರೇಲಿಯಾದ ಯಾವ ಬ್ಯಾಟರ್ಗೂ 20 ರನ್ ಗಳ ಗಡಿ ಮುಟ್ಟಲು ಸಾಧ್ಯವಾಗಲಿಲ್ಲ. ತಂಡದ ಪರ ಅಲೆಕ್ಸ್ ಕ್ಯಾರಿ ಅತ್ಯಧಿಕ ಅಜೇಯ 19 ರನ್ ಗಳಿಸಿದರು.
ಭಾರತ ತಂಡದ ಪರ ನಿತೀಶ್ ರೆಡ್ಡಿ ಗರಿಷ್ಠ 41 ರನ್ ಗಳಿಸಿದರೆ, ರಿಷಭ್ ಪಂತ್ 37 ರನ್ ಹಾಗೂ ಕೆಎಲ್ ರಾಹುಲ್ 26 ರನ್ ಗಳಿಸಿದರು. ಯಶಸ್ವಿ ಜೈಸ್ವಾಲ್ ಮತ್ತು ದೇವದತ್ ಪಡಿಕ್ಕಲ್ ಖಾತೆ ತೆರೆಯದೆ ಪೆವಿಲಿಯನ್‌ಗೆ ಮರಳಿದರೆ, ವಿರಾಟ್ ಕೊಹ್ಲಿ ಐದು ರನ್ ಗಳಿಸಿ ಔಟಾದರು. ಧ್ರುವ್ ಜುರೆಲ್ 11 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ. ವಾಷಿಂಗ್ಟನ್ ಸುಂದರ್ ಕೂಡ ನಾಲ್ಕು ರನ್ ಗಳಿಸಿದ್ದರು.