ಟೆಹ್ರಾನ್: ಅಮೆರಿಕದೊಂದಿಗಿನ ಉದ್ವಿಗ್ನತೆ ಮತ್ತು ದೇಶದೊಳಗಿನ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಇರಾನ್ ತನ್ನ ವೈಮಾನಿಕ ವಲಯವನ್ನು ಮುಚ್ಚಲು ದಿಢೀರನೆ ಆದೇಶಿಸಿದೆ. ಈ ಬೆಳವಣಿಗೆಯಿಂದಾಗಿ ಭಾರತದ ಪ್ರಮುಖ ವಿಮಾನಯಾನ ಸಂಸ್ಥೆಗಳಾದ ಏರ್ ಇಂಡಿಯಾ, ಇಂಡಿಗೋ ಮತ್ತು ಸ್ಪೈಸ್‌ಜೆಟ್‌ನ ಅಂತರರಾಷ್ಟ್ರೀಯ ವಿಮಾನಗಳ ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಸುರಕ್ಷತೆಯ ದೃಷ್ಟಿಯಿಂದ ಇರಾನ್ ಮಾರ್ಗದ ಮೂಲಕ ಸಂಚರಿಸಬೇಕಿದ್ದ ವಿಮಾನಗಳನ್ನು ಬೇರೆ ಮಾರ್ಗಗಳಿಗೆ ವರ್ಗಾಯಿಸಲಾಗುತ್ತಿದೆ ಎಂದು ಸಂಸ್ಥೆಗಳು ತಿಳಿಸಿವೆ.
ಇರಾನ್ ವಾಯುಪ್ರದೇಶ ಮುಚ್ಚಿರುವುದರಿಂದ ಏರ್ ಇಂಡಿಯಾ ತನ್ನ ಹಲವು ವಿಮಾನಗಳ ಮಾರ್ಗವನ್ನು ಬದಲಿಸಿದೆ. ಇದರಿಂದಾಗಿ ವಿಮಾನಗಳು ನಿಗದಿತ ಸಮಯಕ್ಕಿಂತ ತಡವಾಗಿ ತಲುಪುವ ಸಾಧ್ಯತೆಯಿದೆ. ಇನ್ನು ಕೆಲವು ಮಾರ್ಗಗಳಲ್ಲಿ ಪರ್ಯಾಯ ವ್ಯವಸ್ಥೆ ಅಸಾಧ್ಯವಾಗಿರುವುದರಿಂದ ವಿಮಾನ ಸಂಚಾರವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಬರುವ ಮುನ್ನ ತಮ್ಮ ವಿಮಾನದ ಸ್ಥಿತಿಗತಿಯನ್ನು ಪರಿಶೀಲಿಸಿಕೊಳ್ಳುವಂತೆ ಕಂಪನಿಯು ವಿನಂತಿಸಿದೆ.
ಇಂಡಿಗೋ, ಸ್ಪೈಸ್‌ಜೆಟ್‌ನಿಂದ ಪರ್ಯಾಯ ವ್ಯವಸ್ಥೆ
ಇತ್ತ ಇಂಡಿಗೋ ಮತ್ತು ಸ್ಪೈಸ್‌ಜೆಟ್ ಸಂಸ್ಥೆಗಳು ಸಹ ಇರಾನ್ ನಿರ್ಧಾರದಿಂದ ಉಂಟಾಗಿರುವ ತೊಂದರೆಗೆ ವಿಷಾದ ವ್ಯಕ್ತಪಡಿಸಿವೆ. ಈ ಪರಿಸ್ಥಿತಿಯು ತಮ್ಮ ಹತೋಟಿಯಲ್ಲಿಲ್ಲದ ಕಾರಣ, ಪೀಡಿತ ಪ್ರಯಾಣಿಕರಿಗೆ ಟಿಕೆಟ್ ಮೊತ್ತವನ್ನು ಮರುಪಾವತಿಸಲು ಅಥವಾ ಉಚಿತವಾಗಿ ಪ್ರಯಾಣದ ದಿನಾಂಕ ಬದಲಿಸಲು ಅವಕಾಶ ನೀಡಲಾಗುತ್ತಿದೆ. ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಲು ಮತ್ತು ಪ್ರಯಾಣಿಕರಿಗೆ ಅಗತ್ಯ ನೆರವು ನೀಡಲು ತಮ್ಮ ತಂಡಗಳು ನಿರಂತರವಾಗಿ ಶ್ರಮಿಸುತ್ತಿವೆ ಎಂದು ಈ ಸಂಸ್ಥೆಗಳು ಭರವಸೆ ನೀಡಿವೆ.
ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಖಮೇನಿ ವಿರುದ್ಧ ಅಲ್ಲಿನ ನಾಗರಿಕರು ಪ್ರತಿಭಟನೆ ನಡೆಸುತ್ತಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಯಾವುದೇ ಮುನ್ಸೂಚನೆ ನೀಡದೆ ಇರಾನ್ ವಾಯುಪ್ರದೇಶವನ್ನು ಬಂದ್ ಮಾಡಿರುವುದು ಮಿಲಿಟರಿ ಚಟುವಟಿಕೆ ಅಥವಾ ಕ್ಷಿಪಣಿ ಉಡಾವಣೆಯ ಮುನ್ಸೂಚನೆಯಾಗಿರಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಕಾರಣದಿಂದಾಗಿ ನಾಗರಿಕ ವಿಮಾನಗಳ ಸುರಕ್ಷತೆಗೆ ಅಪಾಯವಿರುವುದರಿಂದ ಜಾಗತಿಕ ಮಟ್ಟದ ಹೆಚ್ಚಿನ ವಿಮಾನಯಾನ ಸಂಸ್ಥೆಗಳು ಇರಾನ್ ಮಾರ್ಗವನ್ನು ಬಳಸುವುದನ್ನು ನಿಲ್ಲಿಸಿವೆ.
ಇದನ್ನೂ ಓದಿ: ಇರಾನ್ ಜೊತೆಗಿನ ವ್ಯಾಪಾರಕ್ಕೆ ಅಮೆರಿಕದ ಬರೆ : ಶೇ.75 ಸುಂಕದ ಕಂಟಕದಿಂದ ಭಾರತೀಯ ಹೂಡಿಕೆದಾರರಲ್ಲಿ ಆತಂಕ



















