ಐಸಿಸಿ ಟಿ20 ಟೂರ್ನಿಯಲ್ಲಿ ಪಾಕ್ ವಿರುದ್ಧ ನಡೆದ ರಣ ರೋಚಕ ಪಂದ್ಯದಲ್ಲಿ 6 ರನ್ ಗಳ ಜಯವನ್ನು ಭಾರತ ತಂಡ ಸಾಧಿಸಿದೆ.
ಈ ಮೂಲಕ ಭಾರತ ತಂಡವು ಲೀಗ್ ನಲ್ಲಿ ಸತತ ಎರಡನೇ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಸತತ ಎರಡನೇ ಸೋಲು ಕಂಡಿರುವ ಪಾಕಿಸ್ತಾನ್ ತಂಡ ಮೂರನೇ ಸ್ಥಾನದಲ್ಲೇ ಉಳಿದುಕೊಂಡಿದೆ. ಈ ಸೋಲು ಪಾಕ್ ಗೆ ಭಾರೀ ಆಘಾತವನ್ನೇ ನೀಡಿದೆ. ಲೀಗ್ ಹಂತದಲ್ಲೇ ತನ್ನ ಪ್ರಯಾಣ ಮುಗಿಸುವ ಆತಂಕದಲ್ಲಿ ಪಾಕ್ ತಂಡ ಇದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 19 ಓವರ್ಗಳಲ್ಲಿ 119 ರನ್ಗಳಿಗೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ ಉತ್ತಮ ಆರಂಭದ ಹೊರತಾಗಿಯೂ ಸತತ ವಿಕೆಟ್ ಗಳನ್ನು ಕಳೆದುಕೊಳ್ಳುತ್ತಾ ಭಾರತದ ಕರಾರುವಾಕ್ ಬೌಲಿಂಗ್ ದಾಳಿಗೆ ಮಂಡಿಯೂರಿತು. ಬುಮ್ರಾ ಮೂರು ವಿಕೆಟ್ ಪಡೆದು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ, ಹಾರ್ದಿಕ್ ಎರಡು ವಿಕೆಟ್, ಅರ್ಷದೀಪ್ ಮತ್ತು ಅಕ್ಷರ್ ತಲಾ ಒಂದು ವಿಕೆಟ್ ಕಬಳಿಸಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡಕ್ಕೆ 20 ಓವರ್ ಕೂಡ ಆಡಲು ಆಗಲಿಲ್ಲ. 19 ಓವರ್ ಎದುರಿಸಿ ಎಲ್ಲ ವಿಕೆಟ್ ಕಳೆದುಕೊಂಡು 119 ರನ್ ಗಳಿಸಿತು. ರಿಷಬ್ ಪಂತ್ 42 ರನ್ ಗಳಿಸಿದರೆ, ಅಕ್ಷರ್ ಪಟೇಲ್ 20 ರನ್ ಮತ್ತು ನಾಯಕ ರೋಹಿತ್ ಶರ್ಮಾ 13 ರನ್ ಗಳಿಸಿದರು. ವಿರಾಟ್ ಕೊಹ್ಲಿ 4, ಸೂರ್ಯಕುಮಾರ್ ಯಾದವ್ 7, ಶಿವಂ ದುಬೆ 3 ರನ್ ಗಳಿಸಿ ಔಟ್ ಆದರು. ಹೀಗಾಗಿ ತಂಡದ ಸ್ಕೋರ್ ಏರಲಿಲ್ಲ.
ಭಾರತ ನೀಡಿದ್ದ ಅಲ್ಪ ಮೊತ್ತದ ಗುರಿ ಬೆನ್ನಟ್ಟಿದ್ದ ಪಾಕಿಸ್ತಾನ್ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತ್ತು. ನಾಯಕ ಬಾಬರ್ ಹಾಗೂ ರಿಜ್ವಾನ್ ಮೊದಲ ವಿಕೆಟ್ ಗೆ 26 ರನ್ ಗಳ ಜೊತೆಯಾಟ ನೀಡಿದ್ದರು. ಈ ಸಂದರ್ಭದಲ್ಲಿ ಶಿವಂ ದುಬೆ, ರಿಜ್ವಾನ್ ಅವರ ಕ್ಯಾಚ್ ಕೈಚೆಲ್ಲಿದರು. ಇದು ಪಾಕ್ ಗೆ ನೆರವಾಯಿತು. ನಂತರ ಬುಮ್ರಾ, ಬಾಬರ್ ವಿಕೆಟ್ ಉರುಳಿಸುವ ಮೂಲಕ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಆನಂತರ ಪಾಕ್ ಆಟಗಾರರು ಫೆವಲಿಯನ್ ಪರೇಡ್ ನಡೆಸಿದರು. ಭಾರತದ ಬೌಲರ್ ಗಳು ಕರಾರುವಾಕ್ ದಾಳಿ ನಡೆಸಿದರು. ಪರಿಣಾಮವಾಗಿ 7 ವಿಕೆಟ್ ಕಳೆದುಕೊಂಡು 6 ರನ್ ಗಳಿಂದ ಸೋಲು ಕಂಡಿತು.

