ಬಾಂಗ್ಲಾದೇಶ ವಿರುದ್ಧ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಿದೆ.
ಬರೋಬ್ಬರಿ 86 ರನ್ ಗಳಿಂದ ಭಾರತ ಗೆದ್ದು ಬೀಗಿದೆ. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ಸರಣಿ ವಶಕ್ಕೆ ಪಡೆದಿದೆ. ಟೆಸ್ಟ್ ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳಬೇಕೆಂಬ ಇರಾದೆಯಲ್ಲಿದ್ದ ಬಾಂಗ್ಲಾದೇಶ ತಂಡ ಮತ್ತೊಮ್ಮೆ ಮುಖಭಂಗ ಅನುಭವಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು 9 ವಿಕೆಟ್ ಕಳೆದುಕೊಂಡು 221 ರನ್ ಗಳಿಸಿತ್ತು. ಕಠಿಣ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 135 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಪರ ಅಭಿಷೇಕ್ ಶರ್ಮಾ,ಸಂಜು ಸ್ಯಾಮ್ಸನ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಅವರ ವಿಕೆಟ್‌ಗಳನ್ನು ಕಳೆದುಕೊಂಡಿತು. ಹೀಗಾಗಿ ಭಾರತ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಜೊತೆಯಾದ ನಿತೀಶ್ ರೆಡ್ಡಿ ಮತ್ತು ರಿಂಕು ಸಿಂಗ್ ಬಾಂಗ್ಲಾದೇಶದ ಬೌಲರ್‌ಗಳ ಮೇಲೆ ದಾಳಿ ಮಾಡದರು. ನಿತೀಶ್ ರೆಡ್ಡಿ 28 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದರೆ, ರಿಂಕು 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ಎರಡನೇ ಟಿ20 ಪಂದ್ಯವನ್ನಾಡಿದ ನಿತೀಶ್ ರೆಡ್ಡಿ ಭರ್ಜರಿ ಬ್ಯಾಟಿಂಗ್ ಮಾಡಿ 7 ಸಿಕ್ಸರ್ ಹಾಗೂ 4 ಬೌಂಡರಿ ಸಹಿತ ಕೇವಲ 34 ಎಸೆತಗಳಲ್ಲಿ 74 ರನ್ ಗಳಿಸಿದರು. ರಿಂಕು ಜೊತೆಗೆ ಶತಕದ ಜೊತೆಯಾಟ ನಡೆಸಿದರು. ರಿಂಕು ಸಿಂಗ್ ಕೂಡ 26 ಎಸೆತಗಳಲ್ಲಿ ಅರ್ಧಶತಕ ಗಳಿಸುವ ಮೂಲಕ ಬಾಂಗ್ಲಾದೇಶಕ್ಕೆ ಆಘಾತ ನೀಡಿದರು. ಪರಿಣಾಮವಾಗಿ ಭಾರತ ತಂಡವು 222 ರನ್ ಗಳ ಬೃಹತ್ ಗುರಿ ನೀಡಿತು. ವರುಣ್ ಚಕ್ರವರ್ತಿ ಅದ್ಭುತ ಬೌಲಿಂಗ್ ಮಾಡಿ 4 ಓವರ್‌ಗಳಲ್ಲಿ ಕೇವಲ 19 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದರು.