ವಡೋದರಾ: ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಾಗಲೇ ಭಾರತ ತಂಡಕ್ಕೆ ಆಘಾತಕಾರಿ ಸುದ್ದಿಯೊಂದು ಬಂದಿದೆ. ಗಾಯದ ಸಮಸ್ಯೆಯಿಂದಾಗಿ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಇಡೀ ಸರಣಿಯಿಂದ ಹೊರಬಿದ್ದಿದ್ದು, ಅವರ ಬದಲಿಗೆ ಯುವ ಪ್ರತಿಭೆ ಧ್ರುವ್ ಜುರೆಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ದೃಢಪಡಿಸಿದೆ.
ಡೋದರಾದಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದ ಮುನ್ನಾದಿನದಂದು ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುವಾಗ ಪಂತ್ ಗಾಯಗೊಂಡಿದ್ದಾರೆ. ಥ್ರೋಡೌನ್ ತಜ್ಞರು ಎಸೆದ ಚೆಂಡು ಪಂತ್ ಅವರ ಸೊಂಟದ ಭಾಗಕ್ಕೆ ಬಲವಾಗಿ ಬಡಿದಿದ್ದು, ತೀವ್ರ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ, ಎಂಆರ್‌ಐ ಸ್ಕ್ಯಾನ್ ವರದಿಯಲ್ಲಿ ಬಲಭಾಗದ ಆಂತರಿಕ ಸ್ನಾಯು ಹರಿತ (Internal oblique muscle tear) ಇರುವುದು ಪತ್ತೆಯಾಗಿದೆ. ಮೂಳೆ ತಜ್ಞ ಡಾ. ದಿನ್ಶಾ ಪಾರ್ದಿವಾಲಾ ಅವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ, ಪಂತ್ ಅವರಿಗೆ ವಿಶ್ರಾಂತಿಯ ಅಗತ್ಯವಿರುವುದರಿಂದ ಸರಣಿಯಿಂದ ಕೈಬಿಡಲು ನಿರ್ಧರಿಸಲಾಗಿದೆ. ಸದ್ಯ ಪಂತ್ ಹೆಚ್ಚಿನ ಚಿಕಿತ್ಸೆ ಮತ್ತು ಪುನರ್ವಸತಿಗಾಗಿ ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್ (CoE) ಗೆ ವರದಿ ಮಾಡಿಕೊಳ್ಳಲಿದ್ದಾರೆ.
ಜುರೆಲ್ಗೆ ಮಣೆ
ಪಂತ್ ಅವರ ಅನುಪಸ್ಥಿತಿಯಲ್ಲಿ ತಂಡಕ್ಕೆ ಬಲ ತುಂಬಲು ಧ್ರುವ್ ಜುರೆಲ್ ಅವರಿಗೆ ಮಣೆ ಹಾಕಲಾಗಿದೆ. ಜುರೆಲ್ ಪ್ರಸ್ತುತ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಉತ್ತರ ಪ್ರದೇಶ ತಂಡದ ಪರ ಆಡುತ್ತಿರುವ 24 ವರ್ಷದ ಈ ಯುವ ಆಟಗಾರ, ಆಡಿದ 7 ಇನ್ನಿಂಗ್ಸ್‌ಗಳಲ್ಲಿ 93.00 ರ ಸರಾಸರಿಯಲ್ಲಿ ಒಟ್ಟು 558 ರನ್ ಗಳಿಸಿ ಎಲ್ಲರ ಗಮನ ಸೆಳೆದಿದ್ದಾರೆ. ವಿಶೇಷವಾಗಿ ಬರೋಡಾ ವಿರುದ್ಧ ಅಜೇಯ 160 ರನ್ ಸಿಡಿಸಿ ಲಿಸ್ಟ್-ಎ ಕ್ರಿಕೆಟ್‌ನಲ್ಲಿ ದಾಖಲೆ ಬರೆದಿರುವ ಜುರೆಲ್, ಬಂಗಾಳ ವಿರುದ್ಧದ ಪಂದ್ಯದಲ್ಲೂ ಕೇವಲ 96 ಎಸೆತಗಳಲ್ಲಿ 123 ರನ್ ಚಚ್ಚಿದ್ದರು. ಇವರ ಸ್ಫೋಟಕ ಬ್ಯಾಟಿಂಗ್ ಹಾಗೂ ವಿಕೆಟ್ ಕೀಪಿಂಗ್ ಕೌಶಲವನ್ನು ಪರಿಗಣಿಸಿ ಬಿಸಿಸಿಐ ಈ ಮಹತ್ವದ ನಿರ್ಧಾರ ಕೈಗೊಂಡಿದೆ.
ಭಾರತ ತಂಡದಲ್ಲಿ ಶುಭಮನ್ ಗಿಲ್ ನಾಯಕರಾಗಿ ಮುಂದುವರಿಯಲಿದ್ದು, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್ ಸೇರಿದಂತೆ ಪ್ರಮುಖ ಆಟಗಾರರು ಕಿವೀಸ್ ಸವಾಲನ್ನು ಎದುರಿಸಲು ಸಜ್ಜಾಗಿದ್ದಾರೆ. ಯುವ ಆಟಗಾರರಾದ ಹರ್ಷಿತ್ ರಾಣಾ, ನಿತೀಶ್ ಕುಮಾರ್ ರೆಡ್ಡಿ ಮತ್ತು ಈಗ ಹೊಸದಾಗಿ ಸೇರ್ಪಡೆಯಾಗಿರುವ ಧ್ರುವ್ ಜುರೆಲ್ ತಂಡಕ್ಕೆ ಹೊಸ ಚೈತನ್ಯ ನೀಡುವ ನಿರೀಕ್ಷೆಯಿದೆ.
ಇದನ್ನೂಓದಿ: ಭಾರತ ಕ್ರಿಕೆಟ್‌ನ ‘ಮಹಾಗೋಡೆ’ ರಾಹುಲ್ ದ್ರಾವಿಡ್‌ಗೆ 53ರ ಸಂಭ್ರಮ



















