2024 ರ ಟಿ20 ವಿಶ್ವಕಪ್ ನ ಎರಡನೇ ಸೆಮಿಫೈನಲ್ ಪಂದ್ಯವು ಭಾರತ ಹಾಗೂ ಇಂಗ್ಲೆಂಡ್ ಮಧ್ಯೆ ನಡೆಯಲಿದ್ದು, ವರುಣ ಬೆಂಬಿಡದೆ ಕಾಡುತ್ತಿದ್ದಾನೆ.
ಪಂದ್ಯ ಆರಂಭವಾಗಲು ಇನ್ನೇನು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8ಕ್ಕೆ ಪಂದ್ಯ ಆರಂಭವಾಗಲಿದೆ. ಆದರೆ, ಸದ್ಯ ಪಂದ್ಯ ನಡೆಯುತ್ತಿರುವ ಗಯಾನಾದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಅಲ್ಲಿನ ಸ್ಥಳೀಯ ಕಾಲಮಾನದ ಪ್ರಕಾರ ಬೆಳಿಗ್ಗೆ 10 ಗಂಟೆಗೆ ಪಂದ್ಯ ಆರಂಭವಾಗಬೇಕಿದೆ. ಆದರೆ ಈಗಾಗಲೇ ಧಾರಕಾರ ಮಳೆ ಸುರಿಯುತ್ತಿರುವುದರಿಂದ ಪಂದ್ಯ ಆರಂಭವಾಗುವುದು ತಡವಾಗಬಹುದು ಅಥವಾ ಪಂದ್ಯವೇ ರದ್ದಾಗಬಹುದು ಎನ್ನಲಾಗುತ್ತಿದೆ.
ಅಕ್ಯುವೆದರ್ ಪ್ರಕಾರ, ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಸೆಮಿಫೈನಲ್ ಪಂದ್ಯದ ಆರಂಭ ವಿಳಂಬವಾಗುವ ಎಲ್ಲಾ ಸಾಧ್ಯತೆಗಳಿವೆ. ಸ್ಥಳೀಯ ಕಾಲಮಾನ ಬೆಳಿಗ್ಗೆ 10ಕ್ಕೆ ಅಂದರೆ ಆರಂಭಕ್ಕೆ ಅರ್ಧ ಗಂಟೆ ಮೊದಲು, ಮಳೆಯ ಸಂಭವನೀಯತೆ ಸುಮಾರು ಶೇ. 66ರಷ್ಟಿದೆ. ಬಹುತೇಕ ಮೋಡ ಕವಿದ ವಾತಾವರಣವಿದ್ದು, ಮಳೆಯಾಗುವ ಮುನ್ಸೂಚನೆ ಇದೆ. ಬೆಳಗ್ಗೆ 11 ಗಂಟೆಯ ಮುನ್ಸೂಚನೆಯೂ ಇದೇ ಆಗಿದ್ದು, ಮಳೆಯ ಸಂಭವನೀಯತೆ ಶೇ.75ರಷ್ಟಿದೆ. ಆದರೆ, ಮಧ್ಯಾಹ್ನ 12ರ ನಂತರ ಪರಿಸ್ಥಿತಿ ಸುಧಾರಿಸಬಹುದು ಎನ್ನಲಾಗುತ್ತಿದೆ.
ಈ ಸಂದರ್ಭದಲ್ಲಿ ಮಳೆಯ ಸಂಭವನೀಯತೆ ಶೇ. 49ರಷ್ಟಿದೆ. ಮಧ್ಯಾಹ್ನ 3ರ ವರೆಗೆ ಭಾರತೀಯ ಕಾಲಮಾನ ಮಧ್ಯರಾತ್ರಿ 12:30 ರವರೆಗೆ ಲಘು ಮೋಡಗಳಿದ್ದು, ಶೇ.35 ರಿಂದ 40ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಈ ಮಧ್ಯೆ ಪಂದ್ಯ ನಡೆಯುವ ಸಾಧ್ಯತೆಯೂ ಇದೆ. ಸಂಜೆ 4ಕ್ಕೆ ಮತ್ತೆ ಪಂದ್ಯ ಆರಂಭವಾಗಲಿದ್ದು, ಈ ವೇಳೆಯ ಸಂಭವನಿಯತೆ ಶೇ. 50ರಷ್ಟಿದೆ. ಆದರೆ, ಮಳೆ ಬಿಡುವು ನೀಡುವ ಸಂದರ್ಭದಲ್ಲಿ ಪಂದ್ಯ ನಡೆಸಬಹುದು ಎನ್ನಲಾಗುತ್ತಿದೆ. ಆದರೂ ಮಳೆರಾಯ ಏನು ಮಾಡುತ್ತಾನೆ ಕಾಯ್ದು ನೋಡಬೇಕಿದೆ. ಅಲ್ಲದೆ ಈ ಪಂದ್ಯಕ್ಕೆ ಮೀಸಲು ದಿನ ಕೂಡ ನಿಗದಿಯಾಗಿಲ್ಲ. ಆದರೆ, ಐಸಿಸಿ 250 ನಿಮಿಷಗಳ ಹೆಚ್ಚುವರಿ ಅವಕಾಶ ನೀಡಿದೆ. ಈ ಸಮಯದೊಳಗೆ ಪಂದ್ಯ ಪೂರ್ಣಗೊಳಿಸಲು ಎರಡೂ ತಂಡಗಳು ಕನಿಷ್ಠ ತಲಾ 10 ಓವರ್ ಆಡಬಹುದು. ಒಂದು ವೇಳೆ ಮಳೆಯಿಂದಾಗಿ ಆಡದಿದ್ದರೆ, ಪಂದ್ಯ ರದ್ದಾಗುತ್ತದೆ. ಆಗ ಭಾರತ ತಂಡ ನೇರವಾಗಿ ಫೈನಲ್ ಪ್ರವೇಶ ಮಾಡಲಿದೆ.