ದುಬೈ: 19 ವರ್ಷದೊಳಗಿನವರ (U19) ಪುರುಷರ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡ ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ಭಾನುವಾರ (ಡಿ.14) ದುಬೈನಲ್ಲಿ ನಡೆದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ 90 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ ಭಾರತ ‘ಎ’ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದ್ದು, ಸೆಮಿಫೈನಲ್ ಪ್ರವೇಶಕ್ಕೆ ಮತ್ತಷ್ಟು ಹತ್ತಿರವಾಗಿದೆ.
ಮಳೆಯಿಂದಾಗಿ ಪಂದ್ಯವನ್ನು ತಲಾ 49 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 240 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡ, ಭಾರತದ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ನಲುಗಿ 41.2 ಓವರ್‌ಗಳಲ್ಲಿ ಕೇವಲ 150 ರನ್‌ಗಳಿಗೆ ಆಲೌಟ್ ಆಯಿತು.
ಆರೋನ್ ಜಾರ್ಜ್ ಆಸರೆ, ಆಯುಷ್ ಮ್ಹಾತ್ರೆ ಅಬ್ಬರ
ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಪಾಕಿಸ್ತಾನಕ್ಕೆ ಭಾರತದ ಆರಂಭಿಕ ಆಟಗಾರ ಆಯುಷ್ ಮ್ಹಾತ್ರೆ ದಿಟ್ಟ ಉತ್ತರ ನೀಡಿದರು. ಕೇವಲ 25 ಎಸೆತಗಳಲ್ಲಿ 38 ರನ್ ಸಿಡಿಸಿದ ಅವರು ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಆದರೆ ವೈಭವ್ ಸೂರ್ಯವಂಶಿ, ವಿಹಾನ್ ಮಲ್ಹೋತ್ರಾ ಮತ್ತು ವೇದಾಂತ್ ತ್ರಿವೇದಿ ಅವರು ವೈಫಲ್ಯ ಅನುಭವಿಸಿದಾಗ ತಂಡದ ರನ್ ಗಳಿಕೆ ತುಸು ಕುಸಿತ ಕಂಡಿತು.
ಈ ಹಂತದಲ್ಲಿ ಜವಾಬ್ದಾರಿಯುತ ಆಟವಾಡಿದ ಆರೋನ್ ಜಾರ್ಜ್, ಸಮಯೋಚಿತ 85 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಅವರಿಗೆ ಸಾಥ್ ನೀಡಿದ ಕನಿಷ್ಕ್ ಚೌಹಾಣ್ 46 ರನ್ ಹಾಗೂ ಅಭಿಜ್ಞಾನ್ ಕುಂದು 22 ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು 240ರ ಗಡಿ ತಲುಪಿಸಿದರು. ಪಾಕಿಸ್ತಾನದ ಪರ ಮೊಹಮ್ಮದ್ ಸಯ್ಯಮ್ ಮತ್ತು ಅಬ್ದುಲ್ ಸುಭಾನ್ ತಲಾ 3 ವಿಕೆಟ್ ಪಡೆದರು.
ಪಾಕ್ ಪಾಲಿಗೆ ಕಂಟಕವಾದ ದೀಪೇಶ್
ಗುರಿ ಬೆನ್ನಟ್ಟಿದ ಪಾಕಿಸ್ತಾನಕ್ಕೆ ಭಾರತದ ಬೌಲರ್ ದೀಪೇಶ್ ದೇವೇಂದ್ರನ್ ಆರಂಭದಲ್ಲೇ ಆಘಾತ ನೀಡಿದರು. ತಮ್ಮ 7 ಓವರ್‌ಗಳಲ್ಲಿ ಕೇವಲ 16 ರನ್ ನೀಡಿ 3 ಪ್ರಮುಖ ವಿಕೆಟ್ ಕಬಳಿಸಿದ ದೀಪೇಶ್, ಎದುರಾಳಿ ತಂಡದ ಬೆನ್ನೆಲುಬು ಮುರಿದರು. ಪಾಕ್ ಪರ ಹುಜೈಫಾ ಅಹ್ಸಾನ್ (70) ಏಕಾಂಗಿ ಹೋರಾಟ ನಡೆಸಿದರೂ, ಅವರಿಗೆ ಉಳಿದ ಬ್ಯಾಟರ್‌ಗಳಿಂದ ಸೂಕ್ತ ಬೆಂಬಲ ಸಿಗಲಿಲ್ಲ.
ಬ್ಯಾಟಿಂಗ್‌ನಲ್ಲಿ ವಿಫಲರಾಗಿದ್ದ ವೈಭವ್ ಸೂರ್ಯವಂಶಿ ಫೀಲ್ಡಿಂಗ್ ಮತ್ತು ಬೌಲಿಂಗ್‌ನಲ್ಲಿ ಮಿಂಚಿದರು. ಪಾಕ್ ನಾಯಕ ಫರ್ಹಾನ್ ಯೂಸುಫ್ ವಿಕೆಟ್ ಪಡೆದ ಅವರು, ಹುಜೈಫಾ ಅಹ್ಸಾನ್ ಅವರನ್ನು ಔಟ್ ಮಾಡಲು ಅದ್ಭುತ ಡೈವಿಂಗ್ ಕ್ಯಾಚ್ ಹಿಡಿದರು. ಅಂತಿಮವಾಗಿ ಪಾಕಿಸ್ತಾನ 150 ರನ್‌ಗಳಿಗೆ ಸರ್ವಪತನ ಕಂಡಿತು. ಕನಿಷ್ಕ್ ಚೌಹಾಣ್ ಕೂಡ 3 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಮುಂದಿನ ಪಂದ್ಯ:
ಭಾರತ ತಂಡವು ತನ್ನ ಮುಂದಿನ ಪಂದ್ಯದಲ್ಲಿ ಡಿಸೆಂಬರ್ 16 ರಂದು ಮಲೇಷ್ಯಾ ತಂಡವನ್ನು ಎದುರಿಸಲಿದೆ.
ಸಂಕ್ಷಿಪ್ತ ಸ್ಕೋರ್:
- ಭಾರತ U19: 46.1 ಓವರ್‌ಗಳಲ್ಲಿ 240/10 (ಆರೋನ್ ಜಾರ್ಜ್ 85, ಕನಿಷ್ಕ್ ಚೌಹಾಣ್ 46, ಆಯುಷ್ ಮ್ಹಾತ್ರೆ 38; ಅಬ್ದುಲ್ ಸುಭಾನ್ 3/42).
- ಪಾಕಿಸ್ತಾನ U19: 41.2 ಓವರ್‌ಗಳಲ್ಲಿ 150/10 (ಹುಜೈಫಾ ಅಹ್ಸಾನ್ 70; ದೀಪೇಶ್ ದೇವೇಂದ್ರನ್ 3/16, ಕನಿಷ್ಕ್ ಚೌಹಾಣ್ 3/33).
- ಫಲಿತಾಂಶ: ಭಾರತಕ್ಕೆ 90 ರನ್‌ಗಳ ಗೆಲುವು.
ಇದನ್ನೂ ಓದಿ: ಚವಾಂಖೆಡೆಯಲ್ಲಿ ಕ್ರೀಡಾ ಲೋಕದ ‘ಸುವರ್ಣ ಸಂಗಮ’: ಸಚಿನ್-ಮೆಸ್ಸಿ ಭೇಟಿಗೆ ಸಾಕ್ಷಿಯಾದ ಮುಂಬೈ



















