ನವದೆಹಲಿ : ದೇಶದ ರಸ್ತೆ ಸುರಕ್ಷತೆಯಲ್ಲಿ ಹೊಸ ಕ್ರಾಂತಿಯೊಂದನ್ನು ಸೃಷ್ಟಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೆಜ್ಜೆಯಿಟ್ಟಿದೆ. ಹೆಚ್ಚುತ್ತಿರುವ ಅಪಘಾತಗಳಿಗೆ ಲಗಾಮು ಹಾಕಲು ಸರ್ಕಾರ ಅತ್ಯಾಧುನಿಕ ತಂತ್ರಜ್ಞಾನದ ಮೊರೆ ಹೋಗಿದೆ. ಈ ವರ್ಷಾಂತ್ಯದ ವೇಳೆಗೆ ಭಾರತದಲ್ಲಿ ‘ವೆಹಿಕಲ್-ಟು-ವೆಹಿಕಲ್’ (V2V) ಸಂವಹನ ತಂತ್ರಜ್ಞಾನವನ್ನು ಜಾರಿಗೆ ತರಲು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸಿದ್ಧತೆ ನಡೆಸಿದೆ.
ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರೇ ಈ ಮಾಹಿತಿ ನೀಡಿದ್ದಾರೆ. ಈ ಹೊಸ ವ್ಯವಸ್ಥೆಯು ರಸ್ತೆಯಲ್ಲಿ ಸಂಚರಿಸುವ ವಾಹನಗಳು ಯಾವುದೇ ನೆಟ್‌ವರ್ಕ್ ನೆರವಿಲ್ಲದೆ ಪರಸ್ಪರ ಸಂವಹನ ನಡೆಸಲು ಅನುವು ಮಾಡಿಕೊಡಲಿದ್ದು, ಅಪಘಾತಗಳನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎಂದು ನಿರೀಕ್ಷಿಸಲಾಗಿದೆ.
ಅಪಘಾತಗಳಿಗೆ ಬ್ರೇಕ್ ಹಾಕಲಿರುವ ಸಂವಹನ ವ್ಯವಸ್ಥೆ
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ರಾಜ್ಯ ಸಾರಿಗೆ ಸಚಿವರೊಂದಿಗೆ ನಡೆಸಿದ ವಾರ್ಷಿಕ ಸಭೆಯಲ್ಲಿ ಈ ಮಹತ್ವದ ಯೋಜನೆಯ ವಿವರಗಳನ್ನು ಹಂಚಿಕೊಂಡಿದ್ದಾರೆ. ಮುಖ್ಯವಾಗಿ ಹೆದ್ದಾರಿಗಳಲ್ಲಿ ಕೆಟ್ಟು ನಿಂತಿರುವ ಅಥವಾ ಪಾರ್ಕ್ ಮಾಡಲಾದ ವಾಹನಗಳಿಗೆ ಹಿಂದಿನಿಂದ ವೇಗವಾಗಿ ಬರುವ ವಾಹನಗಳು ಡಿಕ್ಕಿ ಹೊಡೆಯುವಂಥ ಪ್ರಕರಣಗಳು ಹೆಚ್ಚಿವೆ. ಇಂತಹ ಸಂದರ್ಭಗಳಲ್ಲಿ ಮತ್ತು ಚಳಿಗಾಲದ ದಟ್ಟ ಮಂಜಿನಿಂದಾಗಿ ದೃಷ್ಟಿ ಮಂದವಾಗಿ ಸಂಭವಿಸುವ ಸರಣಿ ಅಪಘಾತಗಳನ್ನು ತಡೆಯಲು ವಿ2ವಿ ತಂತ್ರಜ್ಞಾನ ಸಹಕಾರಿಯಾಗಲಿದೆ. ವಾಹನಗಳು ಅಪಾಯಕಾರಿ ಮಟ್ಟಕ್ಕೆ ಒಂದಕ್ಕೊಂದು ಹತ್ತಿರ ಬಂದಾಗ, ಈ ವ್ಯವಸ್ಥೆಯು ಚಾಲಕರಿಗೆ ತಕ್ಷಣವೇ ಎಚ್ಚರಿಕೆಯ ಸಂಕೇತಗಳನ್ನು ರವಾನಿಸುತ್ತದೆ.
ಹೇಗೆ ಕೆಲಸ ಮಾಡುತ್ತದೆ ಈ ನೂತನ ತಂತ್ರಜ್ಞಾನ?
ಈ ತಂತ್ರಜ್ಞಾನದ ಅಡಿಯಲ್ಲಿ ವಾಹನಗಳಲ್ಲಿ ಸಿಮ್ ಕಾರ್ಡ್ ಮಾದರಿಯ ವಿಶೇಷ ಸಾಧನವೊಂದನ್ನು ಅಳವಡಿಸಲಾಗುತ್ತದೆ. ಇದು ಯಾವುದೇ ಮೊಬೈಲ್ ನೆಟ್‌ವರ್ಕ್ ಅಥವಾ ಇಂಟರ್ನೆಟ್ ಅವಲಂಬಿಸದೆ ನೇರವಾಗಿ ಹತ್ತಿರದ ವಾಹನಗಳೊಂದಿಗೆ ಸಿಗ್ನಲ್‌ಗಳನ್ನು ವಿನಿಮಯ ಮಾಡಿಕೊಳ್ಳುತ್ತದೆ. ವಾಹನದ ಸುತ್ತಲೂ 360 ಡಿಗ್ರಿ ವ್ಯಾಪ್ತಿಯಲ್ಲಿ ಇದು ಕಾರ್ಯನಿರ್ವಹಿಸಲಿದ್ದು, ರಸ್ತೆಯ ಪಕ್ಕದಲ್ಲಿರುವ ಸ್ಥಗಿತಗೊಂಡ ವಾಹನಗಳು ಅಥವಾ ಪಕ್ಕದ ಲೇನ್‌ನಲ್ಲಿ ವೇಗವಾಗಿ ಬರುವ ವಾಹನಗಳ ಬಗ್ಗೆ ಚಾಲಕರಿಗೆ ತಕ್ಷಣವೇ ಅಲರ್ಟ್ ನೀಡುತ್ತದೆ. ಪ್ರಸ್ತುತ ಈ ತಂತ್ರಜ್ಞಾನವು ವಿಶ್ವದ ಕೆಲವೇ ಕೆಲವು ರಾಷ್ಟ್ರಗಳಲ್ಲಿ ಮಾತ್ರ ಬಳಕೆಯಲ್ಲಿದೆ ಎಂಬುದು ವಿಶೇಷ.
ಭಾರೀ ವೆಚ್ಚದ ಬೃಹತ್ ಯೋಜನೆ
ಸಾರಿಗೆ ಸಚಿವಾಲಯದ ಕಾರ್ಯದರ್ಶಿ ವಿ. ಉಮಾಶಂಕರ್ ಅವರ ಪ್ರಕಾರ, ಈ ಮಹತ್ವಾಕಾಂಕ್ಷೆಯ ಯೋಜನೆಯ ಒಟ್ಟು ವೆಚ್ಚ ಸುಮಾರು 5,000 ಕೋಟಿ ರೂ.ಗಳು. ಸದ್ಯದಲ್ಲೇ ಈ ತಂತ್ರಜ್ಞಾನದ ಕುರಿತು ಅಧಿಕೃತ ಅಧಿಸೂಚನೆ ಹೊರಬೀಳಲಿದ್ದು, ಆರಂಭಿಕ ಹಂತದಲ್ಲಿ ಹೊಸ ವಾಹನಗಳಲ್ಲಿ ಮಾತ್ರ ಈ ಸಾಧನಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ. ನಂತರ ಹಂತ ಹಂತವಾಗಿ ಹಳೆಯ ವಾಹನಗಳಿಗೂ ಇದನ್ನು ವಿಸ್ತರಿಸುವ ಯೋಜನೆಯಿದೆ. ಈಗಾಗಲೇ ಮಾರುಕಟ್ಟೆಯಲ್ಲಿರುವ ಕೆಲವು ಪ್ರೀಮಿಯಂ ಎಸ್‌ಯುವಿಗಳಲ್ಲಿ ಸೆನ್ಸರ್ ಆಧಾರಿತ ತಂತ್ರಜ್ಞಾನವಿದ್ದರೂ, ಸರ್ಕಾರದ ಈ ಹೊಸ ನೀತಿಯು ಎಲ್ಲಾ ವಾಹನಗಳನ್ನು ಒಂದೇ ಸಂವಹನ ವ್ಯವಸ್ಥೆಯಡಿ ತರಲು ನೆರವಾಗಲಿದೆ.
ಬಸ್ಸುಗಳ ಸುರಕ್ಷತೆಗೂ ಸಿಗಲಿದೆ ಹೆಚ್ಚಿನ ಆದ್ಯತೆ
ಇದೇ ವೇಳೆ ಬಸ್ಸುಗಳ ಸುರಕ್ಷತೆಯ ಬಗ್ಗೆಯೂ ಕಳವಳ ವ್ಯಕ್ತಪಡಿಸಿರುವ ಸಚಿವ ಗಡ್ಕರಿ, ಕಳಪೆ ಬಸ್ ವಿನ್ಯಾಸದಿಂದಾಗಿ ಕಳೆದ ಕೆಲವು ವರ್ಷಗಳಲ್ಲಿ ದೊಡ್ಡ ಮಟ್ಟದ ಪ್ರಾಣಹಾನಿಯಾಗಿದೆ ಎಂದು ತಿಳಿಸಿದ್ದಾರೆ. ಇದನ್ನು ಸರಿಪಡಿಸಲು ‘ಬಸ್ ಬಾಡಿ ಕೋಡ್’ ಅನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುವುದು. ಅಸ್ತಿತ್ವದಲ್ಲಿರುವ ಬಸ್ಸುಗಳಲ್ಲಿ ಅಗ್ನಿಶಾಮಕ ಸಾಧನಗಳು, ಚಾಲಕರು ನಿದ್ರೆಗೆ ಜಾರುತ್ತಿರುವುದನ್ನು ಪತ್ತೆಹಚ್ಚುವ ‘ಡ್ರೌಸಿನೆಸ್ ಡಿಟೆಕ್ಷನ್ ಸಿಸ್ಟಮ್’ ಮತ್ತು ತುರ್ತು ಸಂದರ್ಭದಲ್ಲಿ ಕಿಟಕಿ ಗಾಜು ಒಡೆಯಲು ಅಗತ್ಯವಿರುವ ಹ್ಯಾಮರ್‌ಗಳನ್ನು ಅಳವಡಿಸುವುದು ಕಡ್ಡಾಯವಾಗಲಿದೆ. ರಸ್ತೆ ಸುರಕ್ಷತೆಯ ದೃಷ್ಟಿಯಿಂದ ಕೇಂದ್ರ ಸರ್ಕಾರವು ಕೈಗೊಂಡಿರುವ ಈ ಕ್ರಾಂತಿಕಾರಿ ನಿರ್ಧಾರಗಳು ವಾಹನ ಸವಾರರ ಪಾಲಿಗೆ ಸಂಜೀವಿನಿಯಾಗಲಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ : ಬಳ್ಳಾರಿ ಗಲಭೆ ಕೇಸ್ ತನಿಖೆ CID ಹೆಗಲಿಗೆ | ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ!



















