ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 15 ಸದಸ್ಯರ ತಂಡ ಪ್ರಕಟಿಸಿದೆ.
ಇತ್ತೀಚೆಗೆ ನಡೆದ ಬಾಂಗ್ಲಾದೇಶದ ವಿರುದ್ಧ ಭಾರತ ತಂಡ 2-0 ಅಂತರದ ಗೆಲುವು ಸಾಧಿಸಿದೆ. ರೋಹಿತ್ ಶರ್ಮಾ ಈ ಬಾರಿಯೂ ತಂಡ ಮುನ್ನಡೆಸಲಿದ್ದಾರೆ. ಜಸ್‌ಪ್ರೀತ್ ಬುಮ್ರಾ (Jasprit Bumrah) ಉಪ ನಾಯಕರಾಗಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದ ವೇಗಿ ಯಶ್ ದಯಾಲ್ ಅವರನ್ನು ಮಾತ್ರ ಈ ಬಾರಿ ಕೈ ಬಿಡಲಾಗಿದೆ. ಉಳಿದಂತೆ ಬಾಂಗ್ಲಾ ವಿರುದ್ಧ ಆಡಿದ ತಂಡವನ್ನೇ ಮುಂದುವರೆಸಲಾಗಿದೆ.
ನ್ಯೂಜಿಲೆಂಡ್ ಸರಣಿಗೆ ಮೂವರು ವೇಗದ ಬೌಲರ್ ಗಳಾದ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಆಕಾಶ್ ದೀಪ್ ಆಯ್ಕೆಯಾಗಿದ್ದಾರೆ. ಅನುಭವಿ ಬೌಲರ್ ಮೊಹಮ್ಮದ್ ಶಮಿ ಮೊಣಕಾಲಿನ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದರಿಂದ ಅವರನ್ನು ಕೈಬಿಡಲಾಗಿದೆ. ಅ. 17 ರಿಂದ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿದ್ದು, ಮೊದಲ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಭಾರತ ತಂಡದಲ್ಲಿ ರೋಹಿತ್ ಶರ್ಮಾ (ನಾಯಕ), ಜಸ್‌ಪ್ರಿತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ. ಸಿರಾಜ್, ಆಕಾಶ್ ದೀಪ್ ಸ್ಥಾನ ಪಡೆದಿದ್ದಾರೆ.