ಇಸ್ಲಾಮಾಬಾದ್: ಪಾಕಿಸ್ತಾನದ ನೂತನ ರಕ್ಷಣಾ ಪಡೆಗಳ ಮುಖ್ಯಸ್ಥ(ಚೀಫ್ ಆಫ್ ಡಿಫೆನ್ಸ್ ಫೋರ್ಸಸ್) ಆಗಿ ಅಧಿಕಾರ ವಹಿಸಿಕೊಂಡಿರುವ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್, ಮತ್ತೊಮ್ಮೆ ಭಾರತದ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. “ಭಾರತವು ಯಾವುದೇ ಭ್ರಮೆಯಲ್ಲಿ ಇರಬಾರದು. ಇನ್ನು ಮುಂದೆ ಯಾವುದೇ ಆಕ್ರಮಣದ ಸಂದರ್ಭದಲ್ಲಿ ಪಾಕಿಸ್ತಾನದ ಪ್ರತಿಕ್ರಿಯೆ ಇನ್ನೂ ವೇಗವಾಗಿ ಮತ್ತು ತೀವ್ರವಾಗಿರುತ್ತದೆ,” ಎಂದು ಅವರು ಎಚ್ಚರಿಸಿದ್ದಾರೆ.
ತಮ್ಮ ನೇಮಕಾತಿಯ ಗೌರವಾರ್ಥ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮೂರೂ ಪಡೆಗಳ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಮುನೀರ್, ಪಾಕಿಸ್ತಾನವು ಶಾಂತಿಯುತ ರಾಷ್ಟ್ರವಾಗಿದ್ದರೂ, ಇಸ್ಲಾಮಾಬಾದ್‌ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಪರೀಕ್ಷಿಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಗುಡುಗಿದ್ದಾರೆ.
ಏಕೀ ಹೇಳಿಕೆ?:
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ್ದರು. ಇದಕ್ಕೆ ಪ್ರತಿಯಾಗಿ ಭಾರತವು ಮೇ 7 ರಂದು ‘ಆಪರೇಷನ್ ಸಿಂದೂರ’ ಎಂಬ ಕಾರ್ಯಾಚರಣೆ ನಡೆಸಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸಿತ್ತು. ಬಳಿಕ ಎರಡೂ ದೇಶಗಳ ನಡುವೆ ಘರ್ಷಣೆ ನಡೆದಿತ್ತು. ಈ ಘಟನೆಗಳ ಬೆನ್ನಲ್ಲೇ ಮುನೀರ್ ಈ ಹೇಳಿಕೆ ನೀಡಿದ್ದಾರೆ.
ಅಫ್ಘಾನಿಸ್ತಾನಕ್ಕೂ ಎಚ್ಚರಿಕೆ:
ಪಾಕಿಸ್ತಾನ-ಅಫ್ಘಾನಿಸ್ತಾನದ ನಡುವಿನ ಉದ್ವಿಗ್ನತೆಯ ಬಗ್ಗೆಯೂ ಮಾತನಾಡಿದ ಮುನೀರ್, ಕಾಬೂಲ್‌ನಲ್ಲಿರುವ ತಾಲಿಬಾನ್ ಆಡಳಿತಕ್ಕೆ ಖಡಕ್ ಸಂದೇಶ ರವಾನಿಸಿದ್ದಾರೆ. “ತಾಲಿಬಾನ್‌ಗೆ ಕೇವಲ ಎರಡು ಆಯ್ಕೆಗಳಿವೆ. ಒಂದು ‘ಫಿತ್ನಾ ಅಲ್-ಖವಾರಿಜ್’ (ನಿಷೇಧಿತ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ – ಟಿಟಿಪಿ) ಅಥವಾ ಪಾಕಿಸ್ತಾನ. ಇವೆರಡರಲ್ಲಿ ಒಂದನ್ನು ಅವರು ಆರಿಸಿಕೊಳ್ಳಲೇಬೇಕು,” ಎಂದು ಹೇಳಿದ್ದಾರೆ.
ಅಸಿಮ್ ಮುನೀರ್‌ಗೀಗಿ ಮತ್ತಷ್ಟು ‘ಪವರ್’:
ಚೀಫ್ ಆಫ್ ಡಿಫೆನ್ಸ್ ಫೋರ್ಸಸ್ (CDF): ಕಳೆದ ವಾರವಷ್ಟೇ ಮುನೀರ್ ಅವರನ್ನು ಐದು ವರ್ಷಗಳ ಅವಧಿಗೆ ಪಾಕಿಸ್ತಾನದ ಮೊದಲ ಸಿಡಿಎಫ್ ಆಗಿ ನೇಮಕ ಮಾಡಲಾಗಿದೆ. ಅವರು ಸೇನಾ ಮುಖ್ಯಸ್ಥರಾಗಿಯೂ (COAS) ಮುಂದುವರಿಯಲಿದ್ದಾರೆ.
ಪರಮಾಣು ನಿಯಂತ್ರಣ: ಈ ಹೊಸ ಹುದ್ದೆಯ ಮೂಲಕ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗಳ ಮೇಲಿನ ನಿಯಂತ್ರಣದ ಜೊತೆಗೆ, ದೇಶದ ಪರಮಾಣು ಅಸ್ತ್ರಗಳನ್ನು ನಿರ್ವಹಿಸುವ ‘ನ್ಯಾಷನಲ್ ಸ್ಟ್ರಾಟೆಜಿಕ್ ಕಮಾಂಡ್’ ಮೇಲ್ವಿಚಾರಣೆಯೂ ಅವರ ಕೈ ಸೇರಿದೆ. ಇದರಿಂದಾಗಿ ಅವರು ಪಾಕಿಸ್ತಾನದ ಅತ್ಯಂತ ಶಕ್ತಿಶಾಲಿ ಮಿಲಿಟರಿ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.
ಭಾರತದ ಖಡಕ್ ಪ್ರತಿಕ್ರಿಯೆ:
ಪಾಕಿಸ್ತಾನದ ರಾಜಕೀಯ ಮತ್ತು ಮಿಲಿಟರಿ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಸಚಿವಾಲಯ, “ಪ್ರಜಾಪ್ರಭುತ್ವ ಮತ್ತು ಪಾಕಿಸ್ತಾನ ಒಟ್ಟಿಗೆ ಸಾಗುವುದಿಲ್ಲ,” ಎಂದು ಮಾರ್ಮಿಕವಾಗಿ ನುಡಿದಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಸಂಸ್ಥೆಗಳು ದುರ್ಬಲಗೊಳ್ಳುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ, “ನಾವು ಅಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಆದರೆ ಪ್ರಜಾಪ್ರಭುತ್ವದ ವಿಚಾರದಲ್ಲಿ ಪಾಕಿಸ್ತಾನದ ಬಗ್ಗೆ ಎಷ್ಟು ಕಡಿಮೆ ಮಾತನಾಡುತ್ತೇವೋ ಅಷ್ಟು ಒಳ್ಳೆಯದು,” ಎಂದು ಹೇಳಿದ್ದಾರೆ.
ಇದನ್ನೂ ಓದಿ; ಭಾರತ ಅಕ್ಕಿ ತಂದು ನಮ್ಮ ದೇಶದಲ್ಲಿ ಸುರಿಯುತ್ತಿದೆ : ಭಾರತದ ಅಕ್ಕಿ ಆಮದಿನ ಮೇಲೆಯೂ ಟ್ರಂಪ್ ಸುಂಕ ಬೆದರಿಕೆ



















