ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದ 3ನೇ ದಿನದಾಟದ ಅಂತ್ಯಕ್ಕೆ ಭಾರತ ತಂಡ 9 ವಿಕೆಟ್ ಕಳೆದುಕೊಂಡು 358 ರನ್ ಗಳಿಸಿದೆ.
ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಬ್ಯಾಟಿಂಗ್ ಆಯ್ದುಕೊಂಡಿತ್ತು. ಆಸ್ಟ್ರೇಲಿಯಾ ಪರ ಯುವ ದಾಂಡಿಗ ಸ್ಯಾಮ್ ಕೊನ್ಸ್ಟಾಸ್ (60) ಸ್ಪೋಟಕ ಅರ್ಧಶತಕ ಬಾರಿಸಿದ್ದರು. ಉಸ್ಮಾನ್ ಖ್ವಾಜಾ 57 ರನ್ ಗಳಿಸಿದರೆ, ಮಾರ್ನಸ್ ಲಾಬುಶೇನ್ 72 ರನ್ ಗಳಿಸಿದರು.
4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಟೀವ್ ಸ್ಮಿತ್ 197 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 13 ಫೋರ್ಗಳೊಂದಿಗೆ 140 ರನ್ ಗಳಿಸಿ ಮಿಂಚಿದರು. ಈ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡವು ಪ್ರಥಮ ಇನಿಂಗ್ಸ್ ನಲ್ಲಿ 474 ರನ್ಗಳಿಸಿ ಆಲೌಟ್ ಆಯಿತು. ನಂತರ ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಮತ್ತೊಮ್ಮೆ ಆರಂಭಿಕ ಆಘಾತ ಎದುರಾಯಿತು. ರೋಹಿತ್ ಶರ್ಮಾ ಕೇವಲ 3 ರನ್ಗಳಿಸಿ ಔಟಾದರೆ, ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಕೆಎಲ್ ರಾಹುಲ್ 24 ರನ್ ಗಳಿಸಿದರು. ವಿರಾಟ್ ಕೊಹ್ಲಿ ಹಾಗೂ ಯಶಸ್ವಿ ಜೈಸ್ವಾಲ್ ಶತಕದ ಜೊತೆಯಾಟ ಪ್ರದರ್ಶಿಸಿದರು.
ತಂಡದ ಮೊದತ್ತ 153 ರನ್ ಆಗಿದ್ದ ವೇಳೆ ರನ್ ಕದಿಯುವ ಯತ್ನದಲ್ಲಿ ಯಶಸ್ವಿ ಜೈಸ್ವಾಲ್ (82) ರನೌಟ್ ಆಗಿ ಹೊರ ನಡೆದರು. ವಿರಾಟ್ ಕೊಹ್ಲಿ (36) ಔಟ್ ಆದರು. ಆಕಾಶ್ ದೀಪ್ (0) , ರಿಷಭ್ ಪಂತ್ 28 ರನ್ ಗಳಿಸಿದರು. ರವೀಂದ್ರ ಜಡೇಜಾ 17 ರನ್ ಗಳಿಸಿದರು.
8ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ನಿತೀಶ್ ಕುಮಾರ್ ರೆಡ್ಡಿ – ವಾಷಿಂಗ್ಟನ್ ಸುಂದರ್ ಶತಕದ ಜೊತೆಯಾಟ ನೀಡಿದರು. ಸುಂದರ್ 162 ಎಸೆತಗಳನ್ನು ಎದುರಿಸಿ 50 ರನ್ ಬಾರಿಸಿ ಔಟಾದರೆ, ನಿತೀಶ್ ರೆಡ್ಡಿ ಉತ್ತಮ ಬ್ಯಾಟಿಂಗ್ ಮುಂದುವರೆಸಿದರು. ಅಲ್ಲದೆ 171 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 10 ಫೋರ್ಗಳೊಂದಿಗೆ ಚೊಚ್ಚಲ ಶತಕ ಪೂರೈಸಿದರು.
ಈ ಮೂಲಕ ಭಾರತ ತಂಡ 350 ರ ಗಡಿದಾಟುವಲ್ಲಿ ಯಶಸ್ವಿಯಾಯಿತು. ಸದ್ಯ ಮೂರನೇ ದಿನದಾಟದ ಅಂತ್ಯಕ್ಕೆ 9 ವಿಕೆಟ್ ಕಳೆದು 358 ರನ್ ಗಳಿಸಿದೆ. ಕ್ರೀಸ್ ನಲ್ಲಿ ಮೊಹಮ್ಮದ್ ಸಿರಾಜ್ (2), ನಿತೀಶ್ ಕುಮಾರ್ ರೆಡ್ಡಿ (105) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.