ಜೆಮಿಮಾ ರೋಡ್ರಿಗಸ್ ಅವರ ಅತ್ಯದ್ಭುತ ಅಜೇಯ ಶತಕ ಮತ್ತು ನಾಯಕಿ ಹರ್ಮನ್ ಪ್ರೀತ್ ಕೌರ್ ಅವರ ಹೊಣೆಯರಿತ ಶತಕದ ನೆರವಿನಿಂದ ಭಾರತ ತಂಡ ಹಾಲಿ ವಿಶ್ವಚಾಂಪಿಯನ್ ಆಸ್ಟ್ರೇಲಿಯಾವನ್ನು 5 ವಿಕೆಟ್ ಗಳಿಂದ ಸೋಲಿಸಿ ಐಸಿಸಿ ಮಹಿಳಾ ವಿಶ್ವಕಪ್ ನ ಫೈನಲ್ ಪ್ರವೇಶಿಸಿದೆ. ಈ ಮೂಲಕ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅನುಭವಿಸಿದ್ದ ಆಘಾತಕಾರಿ ಸೋಲಿಗೆ ಈ ಟೂರ್ನಿ ಮುಗಿಯುವುದರೊಳಗಾಗಿಯೇ ಭಾರತ ತಕ್ಕ ತಿರುಗೇಟು ನೀಡಿದೆ. ನವೆಂಬರ್ 2ರಂದು ನಡೆಯುವ ಫೈನಲ್ ನಲ್ಲಿ ಭಾರತ ತಂಡ ಪ್ರಶಸ್ತಿಗಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಣೆಸಬೇಕಿದೆ.
ಆಸ್ಟ್ರೇಲಿಯಾ ತಂಡದ ಪಾರಮ್ಯವನ್ನು ಮುರಿದ ಭಾರತ ಗುರುವಾರದ ಎರಡನೇ ಸೆಮಿಫೈನಲ್ ನಲ್ಲಿ ದಾಖಲಿಸಿದ ಗೆಲುವು ಹಲವು ದಾಖಲೆಗಳಷ್ಟು ಸೃಷ್ಟಿಸಿದೆ.
- ಇದು ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿಹೆಚ್ಚು ರನ್ ಬೆನ್ನಟ್ಟಿ ಸಾಧಿಸಿದ ಗೆಲುವಾಗಿದೆ. ಈ ಮೊದಲು ಭಾರತದ ವಿರುದ್ಧ ಆಸ್ಟ್ರೇಲಿಯಾ ತಂಡ 331 ರನ್ ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ್ದು ದಾಖಲೆಯಾಗಿತ್ತು.
- ಪುರುಷರ ಆಥವಾ ಮಹಿಳಾ ಕ್ರಿಕೆಟ್ ಸೆಮಿಫೈನಲ್ ನಲ್ಲಿ 300ಕ್ಕಿಂತ ಹೆಚ್ಚು ರನ್ ಬೆನ್ನಟ್ಟಿ ಯಾವುದೇ ತಂಡ ಗೆದ್ದಿರುವುದು ಇದೇ ಮೊದಲು.
- ಈ ಪಂದ್ಯದಲ್ಲಿ 679 ರನ್ ಗಳಿಸಿರುವುದು ಕೂಡಾ ದಾಖಲೆಯಾಗಿದೆ. ಇದಕ್ಕೂ ಮುನ್ನ 2017ರ ವಿಶ್ವಕಪ್ನಲ್ಲಿ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಪಂದ್ಯದಲ್ಲಿ 678 ರನ್ ಗಳಿಸಿರುವುದು ದಾಖಲೆಯಾಗಿತ್ತು.
- ಆಸ್ಟ್ರೇಲಿಯಾದ ಆರಂಭಿಕ ಆಟಗಾರ್ತಿ ಫೋಬ್ ಲಿಚ್ ಫೀಲ್ಡ್ ಶತಕ ಗಳಿಸುವ ಮೂಲಕ ವಿಶ್ವಕಪ್ ನಲ್ಲಿ ಶತಕ ದಾಖಲಿಸಿದ ಅತ್ಯಂತ ಕಿರಿಯ ಆಟಗಾರ್ತಿ ಎನಿಸಿಕೊಂಡರು.
- 2017ರ ಸೆಮಿಫೈನಲ್ ನಲ್ಲಿ ಭಾರತದ ವಿರುದ್ಧ ಸೋತ ಬಳಿಕ ಆಸ್ಟ್ರೇಲಿಯಾ ತಂಡ 15 ಸತತ ಗೆಲುವು ದಾಖಲಿಸಿ, ವಿಶ್ವಕಪ್ ನಲ್ಲಿ ಸೋತಿರುವುದು ಇದೇ ಮೊದಲು.



















