ಚಾಂಪಿಯನ್ಸ್ ಟ್ರೋಫಿ 2025ರ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ 44 ರನ್ ಗಳ ಜಯ ಸಾಧಿಸಿದೆ.
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತೀಯ ಬೌಲರ್ ವರುಣ್ ಚಕ್ರವರ್ತಿ ಮಾರಕ ದಾಳಿಗೆ ನ್ಯೂಜಿಲೆಂಡ್ ಮಂಡಿಯೂರಿದೆ. ಈ ಮೂಲಕ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ 44 ರನ್ ಗಳ ಜಯ ಸಾಧಿಸಿದೆ. ಭಾರತ ತಂಡ ಅಜೇಯ ಗೆಲುವಿನೊಂದಿಗೆ ಸೆಮಿಫೈನಲ್ ಪ್ರವೇಶಿಸಿದ್ದು, ಆಸ್ಟ್ರೇಲಿಯಾ ವಿರುದ್ಧ ಸೆಣಸಾಟ ನಡೆಸಬೇಕಿದೆ.
ಈ ಪಂದ್ಯದಲ್ಲಿ ವರುಣ್ ಚಕ್ರವರ್ತಿ ಐದು ವಿಕೆಟ್ ಗೊಂಚಲು ಗಿಫ್ಟ್ ಪಡೆದಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಶ್ರೇಯಸ್ ಅಯ್ಯರ್ ಭರ್ಜರಿ ಅರ್ಧ ಶತಕ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 249 ರನ್ ಗಳಿಸಿತ್ತು. ಈ ಸುಲಭ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ಭಾರತೀಯ ಬೌಲರ್ ಎದುರು ಪ್ರತಿರೋಧ ತೋರಲು ವಿಫಲರಾದರು. ಪರಿಣಾಮ ನ್ಯೂಜಿಲೆಂಡ್ ತಂಡ 45.3 ಓವರ್ ಗಳಲ್ಲಿ 205 ರನ್ ಗಳಿಗೆ ಆಲೌಟ್ ಆಗಿ ಸೋಲು ಅನುಭವಿಸಿತು.
ದುಬೈ ಪಿಚ್ ಸ್ಪಿನ್ನರ್‌ಗಳಿಗೆ ಅನುಕೂಲವಾಗಲಿದೆ ಎಂಬುವುದು ಸಾಬೀತಾಗುತ್ತಲೇ ಇತ್ತು. ಹೀಗಾಗಿ ಇಂದು ಕುಲದೀಪ್, ಅಕ್ಷರ್, ರವೀಂದ್ರ ಜಡೇಜಾ ಹಾಗೂ ವರುಣ್ ಚಕ್ರವರ್ತಿ ಕಣಕ್ಕೆ ಇಳಿದಿದ್ದರು. ಆದರೆ, ಈ ಪೈಕಿ ವರುಣ್ ಮೋಡಿ ಮಾಡುವಲ್ಲಿ ಸಫಲರಾದರು. ವರುಣ್ ಚಕ್ರವರ್ತಿ ಸಿಕ್ಕ ಅವಕಾಶವನ್ನು ಭರ್ಜರಿಯಾಗಿಯೇ ಬಳಸಿಕೊಂಡರು. ಪರಿಣಾಮ 5 ವಿಕೆಟ್ ಪಡೆದು ಮಿಂಚಿದ ಅವರು, ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ನ್ಯೂಜಿಲೆಂಡ್ ಪರ ಕೇನ್ ವಿಲಿಯಮ್ಸನ್ 81 (120) ರನ್ ಸಿಡಿಸಿದರೂ ತಂಡವನ್ನು ಗೆಲ್ಲಿಸುವಲ್ಲಿ ವಿಫಲರಾದರು. ಲೀಗ್ ಹಂತದ ಮೂರು ಪಂದ್ಯಗಳನ್ನು ಗೆದ್ದಿರುವ ಭಾರತ, ಗ್ರೂಪ್ ಎ ನಲ್ಲಿ ಮೊದಲ ಸ್ಥಾನ ಪಡೆದಿದ್ದು, ಮಂಗಳವಾರ ಸೆಮಿಫೈನಲ್ ಪಂದ್ಯದಲ್ಲಿ ಗ್ರೂಪ್ ಬಿ ಯಲ್ಲಿ ಎರಡನೇ ಸ್ಥಾನ ಗಳಿಸಿರುವ ಆಸ್ಟ್ರೇಲಿಯಾ ವಿರುದ್ಧ ಫೈಟ್ ನಡೆಸಲಿದೆ. ಬುಧವಾರ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ.