ಬೆಂಗಳೂರು: ಪೋಸ್ಟ್ ಆಫೀಸ್ ನಲ್ಲಿರುವ ಉಳಿತಾಯ ಯೋಜನೆಗಳಲ್ಲಿ ಠೇವಣಿ ಮಾಡಬೇಕು. ಇದಕ್ಕಾಗಿ ಒಂದು ಬ್ಯಾಂಕ್ ಖಾತೆ ತೆರೆಯಬೇಕು ಎಂದುಕೊಂಡಿದ್ದೀರಾ? ಹಾಗಾದರೆ, ನೀವು ಈಗ ಪೋಸ್ಟ್ ಆಫೀಸಿಗೆ ಹೋಗಿ ಕ್ಯೂನಲ್ಲಿ ನಿಲ್ಲಬೇಕಾಗಿಲ್ಲ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಈಗ ಜನರ ಮನೆ ಬಾಗಿಲಿಗೇ ತೆರಳಿ, ಬ್ಯಾಂಕ್ ಖಾತೆಗಳನ್ನು ತೆರೆಯುತ್ತಾರೆ. ಹಿರಿಯ ನಾಗರಿಕರು ಸೇರಿ ಎಲ್ಲರಿಗೂ ಈ ಸೇವೆ ಲಭ್ಯವಿದೆ.
ಅಧಿಕಾರಿಗಳನ್ನು ಕರೆಸುವುದು ಹೇಗೆ?
ಮನೆ ಬಾಗಿಲಿಗೆ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಅಧಿಕಾರಿಗಳನ್ನು ಹಲವು ರೀತಿಯಲ್ಲಿ ಕರೆಸಬಹುದು. ಗ್ರಾಹಕರು 155299 ಕಸ್ಟಮರ್ ಕೇರ್ ನಂಬರ್ ಗೆ ಕರೆ ಮಾಡಬಹುದು. ಇಲ್ಲವೇ ಪರಿಚಯದ ಪೋಸ್ಟ್ ಮ್ಯಾನ್ ಇದ್ದರೆ ಅವರಿಗೂ ಕರೆ ಮಾಡಿ ಮನೆಗೆ ಕರೆಸಿಕೊಳ್ಳಬಹುದು.
ನೀವು ಕರೆ ಮಾಡಿದ ಬಳಿಕ ನಿಮ್ಮ ಮನೆಗೆ ಪೋಸ್ಟ್ ಮ್ಯಾನ್ ಬರುತ್ತಾರೆ. ನಿಮ್ಮ ಆಧಾರ್ ಸಂಖ್ಯೆ ಹೇಳಿ, ಪ್ಯಾನ್ ಕಾರ್ಡ್ ನಂಬರ್ ಹಾಗೂ ಬಯೋಮೆಟ್ರಿಕ್ ನೀಡಿದರೆ ಕೇವಲ 5-10 ನಿಮಿಷದಲ್ಲಿ ಪೋಸ್ಟ್ ಆಫೀಸ್ ಬ್ಯಾಂಕ್ ಖಾತೆಯನ್ನು ತೆರೆಯಬಹುದಾಗಿದೆ.
ಗ್ರಾಹಕರ ಮನೆಗೆ ಬಂದು ಸೇವಿಂಗ್ಸ್ ಖಾತೆ ತೆರೆಯುವುದಷ್ಟೇ ಅಲ್ಲ, 16 ಸೇವೆಗಳು ಜನರಿಗೆ ಸಿಗುತ್ತವೆ. ಪಬ್ಲಿಕ್ ಪ್ರಾವಿಡೆಂಟ್ ಫಂಡ್, ಸುಕನ್ಯಾ ಸಮೃದ್ಧಿ ಯೋಜನೆ, ರೆಕರಿಂಗ್, ಟೈಮ್ ಡಿಪಾಸಿಟ್ಗಳು, ಮಂತ್ಲಿ ಇನ್ ಕಮ್ ಸ್ಕೀಮ್, ಕಿಸಾನ್ ವಿಕಾಸ್ ಪತ್ರ ಸೇರಿ ಯಾವುದೇ ಖಾತೆಯನ್ನು ಪೋಸ್ಟ್ ಮ್ಯಾನ್ ಮೂಲಕವೇ ತೆರೆಯಬಹುದಾಗಿದೆ.
ಇದಿಷ್ಟೇ ಅಲ್ಲ, ವಿದೇಶದಲ್ಲಿರುವ ಭಾರತೀಯರಿಗೆ ಪತ್ರಗಳು ಅಥವಾ ಪಾರ್ಸೆಲ್ ಗಳನ್ನು ಕಳುಹಿಸಬೇಕಾದರೂ ಅಂಚೆ ಕಚೇರಿಗಳು, ಕೊರಿಯರ್ ಕಚೇರಿಗಳಿಗೆ ಹೋಗಬೇಕಾಗಿಲ್ಲ. ನೇರವಾಗಿ ನಮ್ಮ ಮನೆಯಿಂದಲೇ ವಿದೇಶಗಳಿಗೆ ಕೂಡ ಸ್ಪೀಡ್ ಪೋಸ್ಟ್, ಪಾರ್ಸೆಲ್ಗಳನ್ನು ಕಳುಹಿಸಬಹುದು.



















