ಭಾರತ ಹಾಗೂ ನ್ಯೂಜಿಲೆಂಡ್ ಮಧ್ಯೆ ನಡೆಯುತ್ತಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ಆರಂಭವಾಗದೆ. ಪಂದ್ಯದಲ್ಲಿ ಭಾರತದ ದಾಳಿಗೆ ಸಿಲುಕಿದ ನ್ಯೂಜಿಲೆಂಡ್ 259 ರನ್ ಗಳಿಗೆ ಆಲೌಟ್ ಆಗಿದೆ. ಆದರೆ, ಬಾರತಕ್ಕೂ ಆರಂಭಿಕ ಆಘಾತ ಎದುರಾಗಿದೆ.
ನಾಯಕ ರೋಹಿತ್ ಶರ್ಮಾ ಮತ್ತೊಮ್ಮೆ ನಿರಾಸೆ ಮೂಡಿಸಿದ್ದು, ಬೆಂಗಳೂರು ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 2 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದ್ದ ರೋಹಿತ್, ಈ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಖಾತೆ ತೆರೆಯದೆ ಔಟ್ ಆಗಿದ್ದಾರೆ. ಶುಭ್ಮನ್ ಗಿಲ್ ಹಾಗೂ ಯಶಸ್ವಿ ಜೈಸ್ವಾಲ್ ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ದಿನದಾಟದಂತ್ಯಕ್ಕೆ ಭಾರತ ತಂಡ 1 ವಿಕೆಟ್ ಕಳೆದುಕೊಂಡು 16 ರನ್ ಗಳಿಸಿದೆ.
ಟಾಸ್ ಗೆದ್ದಿದ್ದ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು.ಭಾರತದ ಪರ ಮೂರು ಬದಲಾವಣೆಗಳಾಗಿದ್ದು, ಕೆಎಲ್ ರಾಹುಲ್, ಮೊಹಮ್ಮದ್ ಸಿರಾಜ್ ಮತ್ತು ಕುಲ್ದೀಪ್ ಯಾದವ್ ರನ್ನು ತಂಡದಿಂದ ಕೈಬಿಡಲಾಗಿದೆ. ವಾಷಿಂಗ್ಟನ್ ಸುಂದರ್, ಶುಭ್ಮನ್ ಗಿಲ್ ಮತ್ತು ಆಕಾಶ್ ದೀಪ್ ತಂಡ ಸೇರಿದ್ದಾರೆ.
ಮೊದಲ ಇನ್ನಿಂಗ್ಸ್ ಆರಂಭಿಸಿದ ಕಿವೀಸ್ ಪಡೆಗೆ ಆರಂಭಿಕ ಆಘಾತ ನೀಡುವಲ್ಲಿ ಅಶ್ವಿನ್ ಯಶಸ್ವಿಯಾದರು. ಅಶ್ವಿನ್, ನ್ಯೂಜಿಲೆಂಡ್ ತಂಡದ ಮೊದಲ ಮೂರು ವಿಕೆಟ್ ಪಡೆದರೆ, ನಂತರ ವಾಷಿಂಗ್ಟನ್ ಸುಂದರ್ ಕಿವೀಸ್ ದಾಂಡಿಗರನ್ನು ಮೈದಾನದ ಹೊರಗೆ ಅಟ್ಟಿದರು. ಕಿವೀಸ್ ಪರ ಡೆವೊನ್ ಕಾನ್ವೆ ಅತ್ಯಧಿಕ 76, ರಚಿನ್ ರವೀಂದ್ರ 65 ರನ್ ಗಳಿಸಿದರು. ಮಿಚೆಲ್ ಸ್ಯಾಂಟ್ನರ್ 33 ರನ್ಗಳಿಸಿದರು.