ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಮೇಲುಗೈ ಸಾಧಿಸಿದ್ದು, ಗೆಲುವಿಗೆ 6 ವಿಕೆಟ್ ಗಳ ಅವಶ್ಯಕತೆ ಇದೆ.
ಮೊದಲ ಟೆಸ್ಟ್ ನಲ್ಲಿ ಟಾಸ್ ಗೆದ್ದಿದ್ದ ಬಾಂಗ್ಲಾದೇಶ ತಂಡದ ನಾಯಕ ನಜ್ಮುಲ್ ಹೊಸೈನ್ ಶಾಂತೊ ಬೌಲಿಂಗ್ ಆಯ್ದುಕೊಂಡಿದ್ದರು. ಇನಿಂಗ್ಸ್ ಆರಂಭಿಸಿದ್ದ ಭಾರತ ರವಿಚಂದ್ರನ್ ಅಶ್ವಿನ್ (113) ಶತಕ ಬಾರಿಸಿದರೆ, ರವೀಂದ್ರ ಜಡೇಜಾ (86) ಹಾಗೂ ಯಶಸ್ವಿ ಜೈಸ್ವಾಲ್ (56) ಅರ್ಧಶತಕದ ನೆರವಿನಿಂದ 371 ರನ್ ಗಳಿಸಿತ್ತು.
ನಂತರ ಮೊದಲ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ ತಂಡ ಭಾರತೀಯ ಬೌಲರ್ ಗಳ ದಾಳಿಗೆ ನಲುಗಿ ಹೋಗಿದ್ದರು. ಹೀಗಾಗಿ ಕೇವಲ 147 ರನ್ ಗಳಿಗೆ ಆಲೌಟ್ ಆಗಿ 227 ರನ್ ಗಳ ಹಿನ್ನಡೆ ಅನುಭವಿಸಿತು. ಆನಂತರ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಭಾರತ ಉತ್ತಮ ಆರಂಭ ಪಡೆದಿರಲಿಲ್ಲ. ಆದರೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶುಭ್ಮನ್ ಗಿಲ್ ಹಾಗೂ ರಿಷತ್ ಪಂತ್ ತಂಡಕ್ಕೆ ಆಸರೆಯಾಗಿ ನಿಂತು, ಇಬ್ಬರೂ ಶತಕ ಸಡಿಸಿದ ಸಾಧನೆ ಮಾಡಿದರು.ರಿಷಭ್ ಪಂತ್ 126 ಎಸೆತಗಳಲ್ಲಿ ಶತಕ ಪೂರೈಸಿದರೆ, ಶುಭಮನ್ ಗಿಲ್ 119 ರನ್ ಗಳಿಸಿ ಶತಕ ಸಿಡಿಸಿದರು. ಪರಿಣಾಮವಾಗಿ ದ್ವಿತೀಯ ಇನಿಂಗ್ಸ್ ನಲ್ಲಿ 4 ವಿಕೆಟ್ ಕಳೆದುಕೊಂಡು 287 ರನ್ ಗಳಿಸಿ ಡಿಕ್ಲೇರ್ ಘೋಷಿಸಿತು.
ಗೆಲ್ಲಲು 515 ರನ್ ಗಳ ಕಠಿಣ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡಕ್ಕೆ ಝಾಕಿರ್ ಹಸನ್ ಹಾಗೂ ಶಾದ್ಮನ್ ಇಸ್ಲಾಂ ಉತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ ಗೆ 62 ರನ್ ಗಳಿಸಿತ್ತು. ನಂತರ ಝಾಕಿರ್ (33) ಬುಮ್ರಾ ಎಸೆತದಲ್ಲಿ ಔಟಾದರು. ನಂತರ ಅಶ್ವಿನ್ ದಾಳಿಯಲ್ಲಿ ಶಾದ್ಮನ್ (35), ಮೊಮಿನುಲ್ ಹಕ್ (13) ಹಾಗೂ ಮುಶ್ಫಿಕುರ್ ರಹೀಮ್ (13) ಪೆವಿಲಿಯನ್ ದಾರಿ ಹಿಡಿದರು. ಪರಿಣಾಮ ಈಗ ಬಾಂಗ್ಲಾದೇಶ ತಂಡ 4 ವಿಕೆಟ್ ಕಳೆದುಕೊಂಡು 158 ರನ್ ಗಳಿಸಿದೆ. ಹೀಗಾಗಿ ಭಾರತ ತಂಡಕ್ಕೆ ಗೆಲ್ಲಲು 6 ವಿಕೆಟ್ ಗಳ ಅಗತ್ಯವಿದೆ. ಬಾಂಗ್ಲಾ ಗೆಲ್ಲಲು 357 ರನ್ ಗಳ ಅವಶ್ಯಕತೆ ಇದೆ.