ನವದೆಹಲಿ: ಪಹಲ್ಗಾಮ್ ಉಗ್ರರ ದಾಳಿಗೆ ಭಾರತ ಆಪರೇಷನ್ ಸಿಂಧೂರ್(Operation Sindoor) ಮೂಲಕ ಪ್ರತೀಕಾರ ತೀರಿಸಿಕೊಂಡಿದೆ. ಈ ದಾಳಿಯಲ್ಲಿ 9 ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿ, ಸಂಪೂರ್ಣ ಧ್ವಂಸ ಮಾಡಲಾಗಿತ್ತು. ಘಟನೆಯಲ್ಲಿ 80ಕ್ಕೂ ಅಧಿಕ ಉಗ್ರರ ಬಲಿ ಪಡೆಯಲಾಗಿತ್ತು. ಇದಕ್ಕೆ ಪ್ರತಿಯಾಗಿ ಪಾಕ್ ಕೂಡ ದಾಳಿ ನಡೆಸಿತ್ತು.
ಕುತಂತ್ರಿ ಪಾಕಿಸ್ತಾನ್ ಜನರನ್ನೇ ಟಾರ್ಗೆಟ್ ಮಾಡಿ ದಾಳಿ ನಡೆಸಿತ್ತು. ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ನಾಗರಿಕರ ಮೇಲೆ ಶೆಲ್ ದಾಳಿ ನಡೆಸಿ 16 ಜನರನ್ನು ಹತ್ಯೆ ಮಾಡಿತ್ತು. ಅಲ್ಲದೇ, ಭಾರತದ 15 ನಗರಗಳ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿಗೆ ಪ್ಲಾನ್ ಮಾಡಿತ್ತು. ಆ ಪ್ರಯತ್ನವನ್ನು ಮೆಟ್ಟಿ ನಿಂತಿರುವ ಭಾರತೀಯ ಸೇನೆ ಪಾಕಿಸ್ತಾನದೊಳಗೆ ನುಗ್ಗಿ ಪಾಕಿಸ್ತಾನದ ದಾಳಿಯನ್ನು ವಿಫಲಗೊಳಿಸಿದೆ. ಈ ಮೂಲಕ ಆಪರೇಷನ್ ಸಿಂಧೂರ ಮತ್ತೆ ಮುಂದುವರೆದಿದೆ.
ಪಾಕಿಸ್ತಾನದ ಲಾಹೋರ್, ಕರಾಚಿ, ಸಿಯೋಲ್ ಕೋಟ್ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದೆ. ಈ ಮೂಲಕ ಭಾರತೀಯ ಸೇನೆ ಪಾಕ್ ದಾಳಿ ವಿಫಲಗೊಳಿಸಿದೆ. ನಿನ್ನೆ ರಾತ್ರಿ ಭಾರತದ 15 ನಗರಗಳ ಮೇಲೆ ಪಾಕಿಸ್ತಾನ ದಾಳಿಗೆ ಮುಂದಾಗಿತ್ತು. ಪಾಕಿಸ್ತಾನ ಸೇನೆಯ ದಾಳಿಯನ್ನು ವಿಫಲಗೊಳಿಸಿರುವ ಭಾರತೀಯ ಸೇನೆ S-400 ಏರ್ಡಿಫೆನ್ಸ್ ಸಿಸ್ಟಮ್ ಮೂಲಕ ಪಾಕಿಸ್ತಾನದ ಚೀನಾ ನಿರ್ಮಿತ HQ-9 ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳನ್ನು ಧ್ವಂಸ ಮಾಡಿದೆ.
ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿರುವ ಭಾರತ ಸರ್ಕಾರ, ಪಾಕಿಸ್ತಾನದ ಡ್ರೋನ್, ಕ್ಷಿಪಣಿಗಳನ್ನು ಹೊಡೆದುರುಳಿಸಿದ್ದೇವೆ. ಪಶ್ಚಿಮ ಭಾರತ, ಉತ್ತರ ಭಾರತದ ನಗರಗಳನ್ನು ಟಾರ್ಗೆಟ್ ಮಾಡಿದ್ದ ಪಾಕಿಸ್ತಾನ ಡ್ರೋನ್, ಕ್ಷಿಪಣಿ ದಾಳಿಗೆ ಯತ್ನಿಸಿತ್ತು. S-400 ಏರ್ಡಿಫೆನ್ಸ್ ಮೂಲಕ ಪಾಕಿಸ್ತಾನದ ದಾಳಿ ತಡೆದು ವಿಫಲಗೊಳಿಸಿದ್ದೇವೆ.



















