ಬೆಂಗಳೂರು: ರಾಷ್ಟ್ರೀಯ ನವೋದ್ಯಮ ದಿನ (National Startup day) ಇಂದು. ಪ್ರಧಾನಿ ನರೇಂದ್ರ ಮೋದಿ ಅವರು ಸ್ಟಾರ್ಟಪ್ ಗೆ ಹೆಚ್ಚಿನ ಮಹತ್ವ ನೀಡಿದ್ದರು. ಪರಿಣಾಮವಾಗಿ ಇಂದು ಭಾರತದಲ್ಲಿ ಅಸಂಖ್ಯಾತ ಸ್ಟಾರ್ಟಪ್ ಗಳಿವೆ. ಪರಿಣಾಮ ಇಂದು ಭಾರತ ವಿಶ್ವದಲ್ಲೇ ಮೂರನೇ ಅತಿದೊಡ್ಡ ಸ್ಟಾರ್ಟಪ್ ಹೊಂದಿರುವ ರಾಷ್ಟ್ರವಾಗಿ ಹೊರ ಹೊಮ್ಮಿದೆ. ಅಮೆರಿಕ ಮತ್ತು ಚೀನಾ ಬಿಟ್ಟರೆ ಭಾರತದಲ್ಲೇ ಅತಿ ಹೆಚ್ಚು ಸ್ಟಾರ್ಟಪ್ ಗಳಿವೆ. 2015ರಲ್ಲಿ ಭಾರತದಲ್ಲಿ ಇದ್ದ ಮಾನ್ಯ ಸ್ಟಾರ್ಟಪ್ಗಳ ಸಂಖ್ಯೆ 400 ಮಾತ್ರ. ಈಗ ಈ ಸಂಖ್ಯೆ 1.60 ಲಕ್ಷದ ಹತ್ತಿರವಿದೆ. ಕೇವಲ ಹತ್ತು ವರ್ಷಗಳಲ್ಲಿ ಸ್ಟಾರ್ಟಪ್ ಗಳ ಸಂಖ್ಯೆ 400 ಪಟ್ಟು ಹೆಚ್ಚಾಗಿರುವುದು ಸಂತಸದ ಸಂಗತಿಯಾಗಿದೆ.
ಸರ್ಕಾರಿ ಸ್ವಾಮ್ಯದ ಡಿಪಿಐಐಟಿಯಿಂದ ಮಾನ್ಯತೆ ಪಡೆದ ಸ್ಟಾರ್ಟಪ್ಗಳ ಸಂಖ್ಯೆ ಜನವರಿ 15ರವರೆಗೆ 1.59 ಲಕ್ಷ ಎನ್ನಲಾಗಿದೆ. ಈ ಅಧಿಕೃತ ಸ್ಟಾರ್ಟಪ್ಗಳಿಂದ ಸೃಷ್ಟಿಯಾದ ನೇರ ಉದ್ಯೋಗ 16.6 ಲಕ್ಷ. ಐಟಿ ಸರ್ವಿಸ್ ಕ್ಷೇತ್ರದ ಸ್ಟಾರ್ಟಪ್ ಗಳು 2.04 ಲಕ್ಷ ಉದ್ಯೋಗಗಳನ್ನು ಒದಗಿಸಿವೆ. ಹೆಲ್ತ್ ಕೇರ್ ಮತ್ತು ಲೈಫ್ ಸೈನ್ಸಸ್ ಕ್ಷೇತ್ರಗಳ ಸ್ಟಾರ್ಟಪ್ ಗಳು ಕ್ರಮವಾಗಿ 1.47 ಲಕ್ಷ ಹಾಗೂ 94,000 ಉದ್ಯೋಗಗಳನ್ನು ಸೃಷ್ಟಿಸಿವೆ.
ಬೆಂಗಳೂರು, ಹೈದರಾಬಾದ್, ಮುಂಬೈ, ದೆಹಲಿ ನಗರಗಳು ಸ್ಟಾರ್ಟಪ್ಗಳಿಗೆ ಹೆಸರುವಾಸಿಯಾಗಿವೆ. ಬೆಂಗಳೂರಂತೂ ಸ್ಟಾರ್ಟಪ್ ರಾಜಧಾನಿಯಾಗಿ ಹೊರ ಹೊಮ್ಮಿದೆ. ದೇಶದ 750 ಜಿಲ್ಲೆಗಳಲ್ಲಿ ಸ್ಟಾರ್ಟಪ್ ಗಳಿವೆ. ಭಾರತದಲ್ಲಿ ಒಟ್ಟು 788 ಜಿಲ್ಲೆಗಳಿದ್ದು, ಉಳಿದ 38 ಜಿಲ್ಲೆಗಳಲ್ಲೂ ನವೋದ್ಯಮಗಳು ಸ್ಥಾಪನೆಯಾಗುವ ಕಾಲ ಸನ್ನಿಹಿತವಾಗಿದೆ.