ಭಾರತ ಹಾಗೂ ನ್ಯೂಜಿಲೆಂಡ್ ಮಧ್ಯೆ ನಡೆಯುತ್ತಿರುವ ಎರಡನೇ ಟೆಸ್ಟ್ ನಲ್ಲೂ ಭಾರತ ಮತ್ತೆ ಹೀನಾಯ ಸ್ಥಿತಿಗೆ ಬಂದು ನಿಂತಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಮುನ್ನಡೆ ಸಾಧಿಸಿದ್ದ ನ್ಯೂಜಿಲೆಂಡ್ ಎರಡನೇ ಇನ್ನಿಂಗ್ಸ್ ನಲ್ಲೂ ಬೃಹತ್ ಮುನ್ನಡೆ ಸಾಧಿಸಿದೆ. ಹೀಗಾಗಿ ಭಾರತಕ್ಕೆ ಸೋಲಿನ ಭೀತಿ ಎದುರಾಗಿದೆ.
ಎರಡನೇ ಇನ್ನಿಂಗ್ಸ್ ನಲ್ಲಿ ಐದು ವಿಕೆಟ್ ಕಳೆದುಕೊಂಡು 198 ರನ್ ಗಳಿಸಿದ್ದು, ಬೃಹತ್ ಮೊತ್ತದತ್ತ ಹೆಜ್ಜೆ ಹಾಕಿದೆ. ಕಿವೀಸ್ ತಂಡ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 259 ರನ್ ಗಳಿಸಿತ್ತು. ಉತ್ತರವಾಗಿ ಭಾರತ ತಂಡ ಕೇವಲ 156 ರನ್ ಗಳಿಗೆ ಆಲೌಟ್ ಆಗಿತ್ತು. ಈ ಮೂಲಕ ನ್ಯೂಜಿಲೆಂಡ್ ತಂಡವು 300ಕ್ಕೂ ಅಧಿಕ ರನ್ ಮುನ್ನಡೆ ಪಡೆದಿದೆ. ಈ ಟೆಸ್ಟ್ನಲ್ಲಿ ಮೂರು ದಿನಗಳ ಆಟ ಬಾಕಿ ಇದ್ದು, ಭಾರತ ಸಂಕಷ್ಟ ಅನುಭವಿಸುವುದು ಶತಸಿದ್ಧ ಎನ್ನಲಾಗುತ್ತಿದೆ.
ಎರಡನೇ ಇನ್ನಿಂಗ್ಸ್ ನಲ್ಲಿ ಕಿವೀಸ್ ತಂಡದ ಪರ ನಾಯಕ ಟಾಮ್ ಲೇಥಮ್ 133 ಎಸೆತಗಳಲ್ಲಿ 10 ಬೌಂಡರಿಗಳ ಸಹಿತ 86 ರನ್ ಗಳಿಸಿ ಔಟಾದರೆ, ವಿಕೆಟ್ಕೀಪರ್ ಟಾಮ್ ಬ್ಲಂಡೆಲ್ 30 ರನ್ ಗಳಿಸಿ ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಈ ಇಬ್ಬರ ಹೊರತಾಗಿ ಡೆವೊನ್ ಕಾನ್ವೆ 17 ರನ್, ವಿಲ್ ಯಂಗ್ 23, ರಚಿನ್ ರವೀಂದ್ರ 9 ಮತ್ತು ಡೇರಿಲ್ ಮಿಚೆಲ್ 18 ರನ್ ಗಳಿಸಿದ್ದಾರೆ.
ಭಾರತದ ಮೊದಲ ಇನ್ನಿಂಗ್ಸ್ ನ ಮೊದಲ ದಿನದಾಟದಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು 16 ರನ್ ಗಳಿಸಿತ್ತು. ಎರಡನೇ ದಿನ ಇನ್ನಿಂಗ್ಸ್ ಆರಂಭಿಸಿ 140 ರನ್ ಗಳಿಸುವಷ್ಟರಲ್ಲಿ ಸರ್ವಪತನ ಕಂಡಿತು. ಹೀಗಾಗಿ ಭಾರತದ ಬ್ಯಾಟಿಂಗ್ ವೈಫಲ್ಯ ಎಲ್ಲರ ತಲೆನೋವಿಗೆ ಕಾರಣವಾಗಿದೆ.