ಜಿಂಬಾಬ್ವೆ ವಿರುದ್ಧ ನಡೆದ ಟಿ20 ಎರಡನೇ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಅಂತರದಿಂದ ಗೆಲುವು ಸಾಧಿಸಿದೆ. ಈ ಮೂಲಕ ಮೊದಲ ಪಂದ್ಯದ ಸೇಡು ತೀರಿಸಿಕೊಂಡಿದೆ.
ಆತಿಥೇಯ ತಂಡವನ್ನು ಬರೋಬ್ಬರಿ 100 ರನ್ ಗಳಿಂದ ಸೋಲಿಸಿದೆ. ಇದೇ ಮೈದಾನದಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಭಾರತ ತಂಡವು ಹೀನಾಯ ಸೋಲು ಕಂಡಿತ್ತು. ಆದರೆ ಇಂದು ಭರ್ಜರಿ ಪುನರಾಗಮನ ಮಾಡಿರುವ ಭಾರತ ತಂಡ ಸೇಡು ತೀರಿಸಿಕೊಳ್ಳುವುದರ ಮೂಲಕ ಟೀಕಾಕಾರರ ಬಾಯಿಗೆ ಬೀಗ ಜಡಿದಿದೆ.
ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 234 ರನ್ ಗಳಿಸಿತ್ತು. ಕಠಿಣ ಹಾಗೂ ದಾಖಲೆಯ ಗುರಿ ಬೆನ್ನಟ್ಟಿದ ಜಿಂಬಾಬ್ವೆ ತಂಡ ಆರಂಭದಿಂದಲೇ ಪೆವಿಲಿಯನ್ ಪರೇಡ್ ಆರಂಭಿಸಿ 18.4 ಓವರ್‌ಗಳಲ್ಲಿ 134 ರನ್ ಗಳಿಸಿ ಸೋಲು ಒಪ್ಪಿಕೊಂಡಿತು. ಈ ಮೂಲಕ ಟೀಂ ಇಂಡಿಯಾ ಈ ಪಂದ್ಯದಲ್ಲಿ ಭರ್ಜರಿ ಕಮ್ ಬ್ಯಾಕ್ ಮಾಡಿ 100 ರನ್ ಗಳ ಭರ್ಜರಿ ಜಯ ಸಾಧಿಸಿತು.

ಭಾರತದ ಬ್ಯಾಟ್ಸ್‌ಮನ್‌ಗಳು ಅತ್ಯಂತ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 234 ರನ್ ಕಲೆಹಾಕಿದರು. ನಾಯಕ ಶುಭ್ಮನ್ ಗಿಲ್ ಕೇವಲ 2 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಅಭಿಷೇಕ್ ಶರ್ಮಾ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದರು. ಅವರು 47 ಎಸೆತಗಳಲ್ಲಿ 100 ರನ್ ಗಳಿಸಿದರು. ಅಂತರರಾಷ್ಟ್ರೀಯ ವೃತ್ತಿಜೀವನದ ಮೊದಲ ಶತಕ ಗಳಿಸಿದ ಸಾಧನೆಯನ್ನೂ ಮಾಡಿದರು. ರುತುರಾಜ್ ಗಾಯಕ್ವಾಡ್ ಕೂಡ ಅದ್ಭುತ ಇನ್ನಿಂಗ್ಸ್ ಆಡಿದರು. ಅವರು 47 ಎಸೆತಗಳಲ್ಲಿ 77 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ರಿಂಕು ಸಿಂಗ್ ಕೂಡ ಸ್ಫೋಟಕ ಇನ್ನಿಂಗ್ಸ್ ಆಡಿದರು. ಅವರು 22 ಎಸೆತಗಳಲ್ಲಿ 2 ಬೌಂಡರಿ ಮತ್ತು 5 ಸಿಕ್ಸರ್‌ಗಳ ಸಹಾಯದಿಂದ ಅಜೇಯ 48 ರನ್ ಗಳಿಸಿದರು.

ಬೌಲರ್‌ಗಳು ಕೂಡ ತಮ್ಮ ಕೈಚಳಕ ತೋರಿದರು. ಹೀಗಾಗಿ ಆರಂಭದಿಂದಲೂ ನಿಯಮಿತ ಅಂತರದಲ್ಲಿ ವಿಕೆಟ್ ಗಳನ್ನು ಕಳೆದುಕೊಳ್ಳುತ್ತ ಸಾಗಿದ ಜಿಂಬಾಬ್ವೆ ತಂಡ 18.4 ಓವರ್ ಗಳಲ್ಲಿ 134 ರನ್ ಗಳಿಸಿ ಆಲೌಟ್ ಆಯಿತು. ಅವೇಶ್ ಖಾನ್ ಮತ್ತು ಮುಖೇಶ್ ಕುಮಾರ್ ಭಾರತದ ಪರ ಗರಿಷ್ಠ ತಲಾ 3 ವಿಕೆಟ್ ಪಡೆದರು.