ಗಯಾನ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸುವುದರ ಮೂಲಕ ಫೈನಲ್ ಪ್ರವೇಶಿಸಿದೆ.
ಈ ಮೂಲಕ ಭಾರತ ತಂಡ ಬರೋಬ್ಬರಿ 10 ವರ್ಷಗಳ ನಂತರ ಫೈನಲ್ ಗೆ ಎಂಟ್ರಿ ಕೊಟ್ಟು, ಅಭಿಮಾನಿಗಳಿಗೆ ಸಂತಸ ಮೂಡಿಸಿದೆ. ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡವು 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತ್ತು. 172 ರನ್‌ಗಳ ಗುರಿ ಬೆನ್ನಟ್ಟಿದ್ದ ಇಂಗ್ಲೆಂಡ್ ತಂಡ 16.4 ಓವರ್ ಗಳಲ್ಲೇ 103 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡು ಸೋಲು ಒಪ್ಪಿಕೊಂಡಿತು.

ಈ ಗೆಲುವಿನ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲಿ ಮೂರನೇ ಬಾರಿಗೆ ಭಾರತ ತಂಡ ಫೈನಲ್ ಪ್ರವೇಶಿಸಿದೆ. ಕಳೆದ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಇದೇ ಇಂಗ್ಲೆಂಡ್ ವಿರುದ್ಧ ಎದುರಿಸಿದ್ದ, 10 ವಿಕೆಟ್ ಗಳ ಹೀನಾಯ ಸೋಲಿಗೆ ಈಗ ಸೇಡು ತೀರಿಸಿಕೊಂಡಿದೆ.
ಭಾರತಕ್ಕೆ, ಇಂಗ್ಲೆಂಡ್ ವಿರುದ್ಧ ಕೂಡ ಆರಂಭಿಕ ಆಘಾತವಾಗಿತ್ತು. ಮೊದಲಿಗೆ, ತಂಡ 19 ರನ್ ಗಳಿಸಿದ್ದಾಗ ವಿರಾಟ್ ಕೊಹ್ಲಿ 9 ರನ್ ಗಳಿಸಿ ಔಟಾದರು. ರಿಷಬ್ ಪಂತ್ ಕೂಡ 4 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು. ಹೀಗಾಗಿ ಟೀಂ ಇಂಡಿಯಾ ಮೊದಲ 6 ಓವರ್ಗಳಲ್ಲಿ 40 ರನ್ ಗಳಿಸಿತ್ತು. ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಇಬ್ಬರೂ ಟೀಮ್ ಇಂಡಿಯಾದ ಇನ್ನಿಂಗ್ಸ್ ನಿಭಾಯಿಸಿ, ಅತ್ಯಮೂಲ್ಯ 73 ರನ್‌ಗಳ ಜೊತೆಯಾಟ ನೀಡಿದರು
ಈ ಸಂದರ್ಭದಲ್ಲಿ ರೋಹಿತ್ 32ನೇ ಅರ್ಧಶತಕ ದಾಖಲಿಸಿದರು. ನಂತರ 57 ರನ್ ಬಾರಿಸಿ ಇನ್ನಿಂಗ್ಸ್ ಮುಗಿಸಿದರೆ, ಸೂರ್ಯಕುಮಾರ್ 47 ರನ್ ಗಳಿಸಿ ಔಟ್ ಆದರು. ರವೀಂದ್ರ ಜಡೇಜಾ ಔಟಾಗದೆ 17 ರನ್ ಬಾರಿಸಿದರೆ, ಹಾರ್ದಿಕ್ ಪಾಂಡ್ಯ 23 ರನ್ಗಳ ಸ್ಫೋಟಕ ಇನ್ನಿಂಗ್ಸ್ ಕಟ್ಟಿದರು. ಅಕ್ಷರ್ ಪಟೇಲ್ 10 ರನ್ ಗಳಿಸಿದರು. ಇಂಗ್ಲೆಂಡ್ ಪರ ಬೌಲ್ ಮಾಡಿದ 6 ಬೌಲರ್ಗಳ ಪೈಕಿ ನಾಲ್ವರು ತಲಾ 1 ವಿಕೆಟ್ ಪಡೆದರೆ, ಕ್ರಿಸ್ ಜೋರ್ಡಾನ್ 3 ವಿಕೆಟ್ ಪಡೆದು ಮಿಂಚಿದರು.

172 ರನ್ ಗುರಿ ಬೆನ್ನಟ್ಟಿದ್ದ ಇಂಗ್ಲೆಂಡ್ಗೆ, ಮೊದಲ ವಿಕೆಟ್ಗೆ 26 ರನ್ ಗಳ ಆರಂಭಿಕ ಜೊತೆಯಾಟ ಸಿಕ್ಕಿತು. ನಂತರ ನಾಯಕ ಜೋಸ್ ಬಟ್ಲರ್ ವಿಕೆಟ್ ಪತನದೊಂದಿಗೆ ಇಂಗ್ಲೆಂಡ್ ತಂಡದ ಪೆವಿಲಿಯನ್ ಪರೇಡ್ ಆರಂಭವಾಯಿತು. ಆಂಗ್ಲ ಪರ ಹ್ಯಾರಿ ಬ್ರೂಕ್ 25 ರನ್ ಗಳಿಸಿದ್ದೇ ಗರಿಷ್ಠ ಸ್ಕೋರ್ ಆಯಿತು. ಜೋಸ್ ಬಟ್ಲರ್ 23 ರನ್ ಗಳಿಸಿದರು. ಜೋಫ್ರಾ ಆರ್ಚರ್ 21 ರನ್ ಗಳಿಸಿದರು. ಭಾರತದ ಪರ ಕುಲ್ದೀಪ್ ಯಾದವ್ 3, ಅಕ್ಷರ್ ಪಟೇಲ್ 3 ಹಾಗೂ ಬುಮ್ರಾ 2 ವಿಕೆಟ್ ಪಡೆದರು.
ಈ ಮೂಲಕ ನಾಳೆ (29) ಫೈನಲ್ ಕಾದಾಟದಲ್ಲಿ ಭಾರತವು, ಸೌತ್ ಆಫ್ರಿಕಾ ತಂಡವನ್ನು ಎದುರಿಸಲಿದೆ. ಈ ಬಾರಿಯ ವಿಶ್ವಕಪ್ ಪಂದ್ಯಗಳಲ್ಲಿ ಅಜೇಯ ಓಟ ಮುಂದುವರೆಸಿರುವ ‘ಭಾರತವೇ’ ಸದ್ಯ ‘ಕಪ್ ಗೆಲ್ಲುವ’ ನೆಚ್ಚಿನ ತಂಡ ಎನ್ನಲಾಗಿದೆ.