ಮಹಿಳಾ ಟಿ20 ವಿಶ್ವಕಪ್ನ 12ನೇ ಪಂದ್ಯದಲ್ಲಿ ಭಾರತ ಮಹಿಳೆಯರ ತಂಡ ಶ್ರೀಲಂಕಾ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿದೆ.
ಬೃಹತ್ ಅಂತರದಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಭಾರತ ರನ್ ರೇಟ್ ನಲ್ಲಿ ಉತ್ತಮ ಅಂಕ ಪಡೆದು, ಫೈನಲ್ ಕನಸನ್ನು ಜೀವಂತವಾಗಿಟ್ಟುಕೊಂಡಿದೆ. ಸೆಮಿಫೈನಲ್ ಕನಸಿಗಾಗಿ ಈ ಪಂದ್ಯದಲ್ಲಿ ಭಾರತ ತಂಡ ಬೃಹತ್ ಅಂತರದ ಗೆಲ್ಲುವನ್ನು ದಾಖಲಿಸಲೇಬೇಕಿತ್ತು. ಬರೋಬ್ಬರಿ 82 ರನ್ಗಳಿಂದ ಶ್ರೀಲಂಕಾ ಮಣಿಸಿ, ತನ್ನ ಮುಂದಿನ ಹಾದಿಯನ್ನು ಜೀವಂತವಾಗಿರಿಸಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಹರ್ಮನ್ಪ್ರೀತ್ ಪಡೆ 3 ವಿಕೆಟ್ ಕಳೆದುಕೊಂಡು 173 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ಪೂರ್ಣ 20 ಓವರ್ ಗಳನ್ನು ಆಡಲು ಸಾಧ್ಯವಾಗದೆ 19.5 ಓವರ್ ಗಳಲ್ಲಿ ವಿಕೆಟ್ ಕಳೆದುಕೊಂಡು 90 ರನ್ ಗಳಿಸಿ ಸೋಲು ಒಪ್ಪಿಕೊಂಡಿತು.
ಭಾರತ ತಂಡವು ಮೊದಲ ಪಂದ್ಯದಲ್ಲಿಯೇ ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡಿತ್ತು. ನಂತರ ಪಾಕ್ ವಿರುದ್ಧ 6 ವಿಕೆಟ್ ಗಳಿಂದ ಗೆಲುವು ಸಾಧಿಸಿತ್ತು. ಈಗ ಲಂಕಾ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ, ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಂದು ನಿಂತಿದೆ. ಮುಂದಿನ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸೆಣಸಾಟ ನಡೆಸಲಿದ್ದು, ಈ ಪಂದ್ಯದಲ್ಲಿ ಗೆದ್ದರೆ, ಸೆಮಿಫೈನಲ್ ಪ್ರವೇಶಿಸುವುದು ಬಹುತೇಕ ಖಚಿತವಾಗಲಿದೆ.