ಭಾರತ ಹಾಗೂ ಆಸ್ಟ್ರೇಲಿಯಾ ಮಧ್ಯೆ ಐದು ಪಂದ್ಯಗಳ ಟೂರ್ನಿ ಆರಂಭವಾಗಿದ್ದು, ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತ ತಂಡ ಮತ್ತೆ ಕುಸಿತ ಕಂಡಿದೆ.
ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಆದರೆ, ಭಾರತದ ಬ್ಯಾಟಿಂಗ್ ಮತ್ತೆ ಕುಸಿದಿದೆ. ತಂಡದ ಪರ ಕೆಎಲ್ ರಾಹುಲ್, ರಿಷಬ್ ಪಂತ್ ಹಾಗೂ ಚೊಚ್ಚಲ ಪಂದ್ಯವನ್ನಾಡುತ್ತಿರುವ ನಿತೀಶ್ ಕುಮಾರ್ ರೆಡ್ಡಿ ಸ್ವಲ್ಪ ಹೋರಾಟ ನಡೆಸಿದ್ದರಿಂದಾಗಿ 150 ರನ್ ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ನ್ನು ಮುಗಿಸಿತು.
ಭಾರತ ತಂಡ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 49.3 ಓವರ್ ಗಳಲ್ಲಿ 150 ರನ್ ಗಳಿಗೆ ಆಲೌಟ್ ಆಯಿತು. ಭಾರತದ ಪರ ನಿತೀಶ್ ರೆಡ್ಡಿ ಗರಿಷ್ಠ 41 ರನ್ ಗಳಿಸಿದರೆ, ರಿಷಭ್ ಪಂತ್ 37 ರನ್ ಹಾಗೂ ಕೆಎಲ್ ರಾಹುಲ್ 26 ರನ್ ಗಳಿಸಿದರು.
ಭಾರತಕ್ಕೆ ಕಳೆದ ಕೆಲವು ದಿನಗಳಿಂದ ಕಾಡುತ್ತಿರುವ ಉತ್ತಮ ಆರಂಭಿಕ ಜೊತೆಯಾಟ ಈ ಸರಣಿಯಲ್ಲೂ ಸಿಗಲಿಲ್ಲ. ರಾಹುಲ್ ಹಾಗೂ ಜೈಸ್ವಾಲ್ಗೆ 5 ರನ್ಗಳ ಜೊತೆಯಾಟ ನೀಡಲಷ್ಟೇ ಸಾಧ್ಯವಾಯಿತು. ಜೈಸ್ವಾಲ್ ಸೊನ್ನೆಗೆ ವಿಕೆಟ್ ಒಪ್ಪಿಸಿದರೆ, ನಂತರ ಬಂದ ದೇವದತ್ ಪಡಿಕ್ಕಲ್ ಕೂಡ ಸೊನ್ನೆಗೆ ಔಟ್ ಆದರು.
ನಾಲ್ಕನೇ ಕ್ರಮಾಂಕದಲ್ಲಿ ನಿರೀಕ್ಷೆಗಳ ಮೂಟೆ ಹೊತ್ತು ಬ್ಯಾಟಿಂಗ್ ಗೆ ಇಳಿದ ವಿರಾಟ್ ಕೊಹ್ಲಿ ಮತ್ತೊಮ್ಮೆ ನಿರಾಸೆ ಮೂಡಿಸಿದರು. ವಿರಾಟ್ 5 ರನ್ ಗಳಿಗೆ ಔಟಾದರೆ, ಧ್ರುವ್ ಜುರೆಲ್ 11 ರನ್ ಗಳಿಸಿದರು. ವಾಷಿಂಗ್ಟನ್ ಸುಂದರ್ ನಾಲ್ಕು ರನ್ ಗಳಿಸಿದರು. ಕೊನೆಗೆ ಭಾರತ ತಂಡ 150 ರನ್ ಗಳಿಗೆ ಸರ್ವಪತನ ಕಂಡಿತು. ಆಸ್ಟ್ರೇಲಿಯಾ ಪರ ಜೋಶ್ ಹೇಜಲ್‌ವುಡ್ ನಾಲ್ಕು ವಿಕೆಟ್ ಪಡೆದರೆ, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ ಮತ್ತು ಮಾರ್ಷ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.