ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಫೈನಲ್ ಗೆ ಏರುವುದಕ್ಕೆ ಹಲವು ತಂಡಗಳ ಮಧ್ಯೆ ಪೈಪೋಟಿ ನಡೆಯುತ್ತಿದ್ದು, ಭಾರತ ಈ ಹಾದಿಯಲ್ಲಿ ಸದ್ಯಕ್ಕೆ ಮುಂದಿದೆ. ಬಾಂಗ್ಲಾ ವಿರುದ್ಧ ನಡೆಯಲಿರುವ ಎರಡು ಟೆಸ್ಟ್ ಪಂದ್ಯಗಳಲ್ಲಿ ಭಾರತ ಗೆದ್ದರೆ, ಈ ಹಾದಿ ಮತ್ತಷ್ಟು ಸನಿಹವಾಗಲಿದೆ.
ಈಗಾಗಲೇ ಎರಡೂ ಡಬ್ಲ್ಯುಟಿಸಿ ಫೈನಲ್ ನಲ್ಲಿ ಭಾರತ ಸೆಣಸಾಟ ನಡೆಸಿದರೂ ಪ್ರಶಸ್ತಿ ಕೈ ಚೆಲ್ಲಿದೆ. ಈ ಬಾರಿ ಚಾಂಪಿಯನ್ ಕನಸನ್ನು ನನಸು ಮಾಡಿಕೊಳ್ಳಲು ಟೀಂ ಇಂಡಿಯಾಗೆ ಎಷ್ಟು ಅವಕಾಶವಿದೆ ಎಂಬುವುದನ್ನು ಐಸಿಸಿ ಅಪ್‌ಡೇಟ್ ಮಾಡಿದೆ.
ಇದೀಗ ಟೀಂ ಇಂಡಿಯಾಗೆ 10 ಟೆಸ್ಟ್ ಪಂದ್ಯಗಳು ಬಾಕಿ ಇವೆ. ಇದರಲ್ಲಿ 5 ಟೆಸ್ಟ್ ಪಂದ್ಯಗಳು ಭಾರತದಲ್ಲಿ ನಡೆದರೆ, ಉಳಿದ 5 ಟೆಸ್ಟ್ ಪಂದ್ಯಗಳು ವಿದೇಶ ನೆಲದಲ್ಲಿ ನಡೆಯಲಿವೆ. ಭಾರತ ತಂಡ ಎಲ್ಲ ಪಂದ್ಯಗಳನ್ನು ಗೆದ್ದರೆ ಗೆಲುವಿನ ಶೇಕಡಾವಾರು 85.09ರಷ್ಟಾಗಲಿದೆ.
ಇನ್ನುಳಿದ 10 ಪಂದ್ಯಗಳ ಪೈಕಿ ಭಾರತ ತಂಡ ತವರಿನಲ್ಲಿ ಬಾಂಗ್ಲಾದೇಶ ವಿರುದ್ಧ 2 ಟೆಸ್ಟ್ ಹಾಗೂ ನ್ಯೂಜಿಲೆಂಡ್ ವಿರುದ್ಧ 3 ಟೆಸ್ಟ್ ಪಂದ್ಯಗಳನ್ನು ಆಡಬೇಕಿದೆ. ನಂತರ 5 ಟೆಸ್ಟ್ ಪಂದ್ಯಗಳಿಗಾಗಿ ಆಸ್ಟ್ರೇಲಿಯಾಕ್ಕೆ ಪ್ರವಾಸ ಬೆಳೆಸಲಿದೆ. ಭಾರತ ನೆಲದಲ್ಲಿನ ಎಲ್ಲ ಪಂದ್ಯ ಗೆದ್ದರೆ ಗೆಲುವಿನ ಶೇಕಡಾವಾರು 79.76 ಆಗಲಿದೆ. ಇಷ್ಟು ಅಂಕ ಬಂದರೆ ಸಾಕು, ಭಾರತದ ಹಾದಿ ಸುಗಮವಾಗಲಿದೆ.
ಹಲವು ವರ್ಷಗಳಿಂದ ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿರುವ ಟೀಮ್ ಇಂಡಿಯಾಗೆ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್ ಷಿಪ್ ಟ್ರೋಫಿ ಗೆಲುವು ಮಾತ್ರ ಸಾಧ್ಯವಾಗದೇ ಇರುವುದು ದುರದೃಷ್ಟಕರ. ಆದರೆ, ಈ ಬಾರಿ ಭಾರತ ಮತ್ತೊಮ್ಮೆ ಪೈನಲ್ ತಲುಪಿ ಗೆಲುವು ಕಾಣಲಿ ಎಂಬುವುದು ಕ್ರೀಡಾಭಿಮಾನಿಗಳ ಆಶಯವಾಗಿದೆ.
2019ರಿಂದ 2021ರವರೆಗಿನ ಮೊದಲ ಆವೃತ್ತಿಯಲ್ಲಿ ಫೈನಲ್ ತಲುಪಿದ್ದ ಭಾರತ ತಂಡ ನ್ಯೂಜಿಲೆಂಡ್ ಎದುರು ನಿರಾಶೆ ಅನುಭವಿಸಿತ್ತು. 2021-23ರ ವರೆಗಿನ ಎರಡನೇ ಆವೃತ್ತಿಯಲ್ಲೂ ಫೈನಲ್ ಗೆ ಕಾಲಿಟ್ಟು ಆಸ್ಟ್ರೇಲಿಯಾ ಎದುರು ಸೋಲು ಕಂಡಿತ್ತು. ಈಗ 2023ರಿಂದ 2025ರವರೆಗಿನ ಮೂರನೇ ಆವೃತ್ತಿಯಲ್ಲೂ ಫೈನಲ್ ತಲುಪುವ ಫೇವರಿಟ್ ತಂಡವಾಗಿದೆ.
2023-25ರ ಸಾಲಿನ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ
ಟೀಮ್ ಇಂಡಿಯಾ – 68.52 ಸರಾಸರಿ ಅಂಕ
ಆಸ್ಟ್ರೇಲಿಯಾ – 62.5 ಸರಾಸರಿ ಅಂಕ
ನ್ಯೂಜಿಲೆಂಡ್ – 50.0 ಸರಾಸರಿ ಅಂಕ
ಬಾಂಗ್ಲಾದೇಶ – 45.83 ಸರಾಸರಿ ಅಂಕ
ಶ್ರೀಲಂಕಾ – 42.86 ಸರಾಸರಿ ಅಂಕ
ಇಂಗ್ಲೆಂಡ್ – ಸರಾಸರಿ ಅಂಕ
ಸೌತ್ ಆಫ್ರಿಕಾ – 38.89 ಸರಾಸರಿ ಅಂಕ
ಪಾಕಿಸ್ತಾನ – 19.05 ಸರಾಸರಿ ಅಂಕ
ವೆಸ್ಟ್ ಇಂಡೀಸ್ – 18.52 ಸರಾಸರಿ ಅಂಕ ಸ್ಥಾನದಲ್ಲಿವೆ.