ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಜಯದೊಂದಿಗೆ ಎರಡು ಪಂದ್ಯಗಳ ಸರಣಿಯನ್ನು ಟೀಮ್ ಇಂಡಿಯಾ 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ (175) ಹಾಗೂ ಶುಭ್ಮನ್ ಗಿಲ್ (129) ಶತಕ ಸಿಡಿಸಿದ್ದರು. ಈ ಸೆಂಚುರಿಗಳ ನೆರವಿನೊಂದಿಗೆ ಭಾರತ ತಂಡವು ಮೊದಲ ಇನಿಂಗ್ಸ್ನಲ್ಲಿ 5 ವಿಕೆಟ್ ನಷ್ಟಕ್ಕೆ 518 ರನ್ಗಳಿಸಿ ಡಿಕ್ಲೇರ್ ಘೋಷಿಸಿತು.
ಇದರ ಬೆನ್ನಲ್ಲೇ ಮೊದಲ ಇನಿಂಗ್ಸ್ ಶುರು ಮಾಡಿದ ವೆಸ್ಟ್ ಇಂಡೀಸ್ ತಂಡವು ಕೇವಲ 248 ರನ್ಗಳಿಗೆ ಆಲೌಟ್ ಆಗಿದ್ದರು. ಅತ್ತ 270 ರನ್ಗಳ ಮುನ್ನಡೆ ಪಡೆದ ಟೀಮ್ ಇಂಡಿಯಾ ಫಾಲೋ ಆನ್ ಹೇರಿತು. ಅದರಂತೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ಪರ ಜಾನ್ ಕ್ಯಾಂಪ್ಬೆಲ್ (115) ಹಾಗೂ ಶೈ ಹೋಪ್ (103) ಶತಕ ಸಿಡಿಸಿದರು.
ಇನ್ನು ಏಳನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜಸ್ಟಿನ್ ಗ್ರೀವ್ಸ್ 50 ರನ್ಗಳ ಕೊಡಗೆ ನೀಡಿದರು. ಈ ಮೂಲಕ ವೆಸ್ಟ್ ಇಂಡೀಸ್ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ 390 ರನ್ಗಳಿಸಿ ಆಲೌಟ್ ಆಯಿತು.
121 ರನ್ಗಳ ಗುರಿ : ಮೊದಲ ಇನಿಂಗ್ಸ್ನಲ್ಲಿ 270 ರನ್ಗಳ ಮುನ್ನಡೆ ಪಡೆದಿದ್ದ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್ನಲ್ಲಿ 121 ರನ್ಗಳ ಗುರಿ ಪಡೆಯಿತು. ಅದರಂತೆ ಸೆಕೆಂಡ್ ಇನಿಂಗ್ಸ್ ಶುರು ಮಾಡಿದ ಭಾರತ ತಂಡವು ಆರಂಭದಲ್ಲೇ ಯಶಸ್ವಿ ಜೈಸ್ವಾಲ್ (8) ವಿಕೆಟ್ ಕಳೆದುಕೊಂಡಿತು.
ಈ ಹಂತದಲ್ಲಿ ಜೊತೆಗೂಡಿದ ಕೆಎಲ್ ರಾಹುಲ್ ಹಾಗೂ ಸಾಯಿ ಸುದರ್ಶನ್ 79 ರನ್ಗಳ ಜೊತೆಯಾಟವಾಡಿದರು. ಆದರೆ ತಂಡದ ಮೊತ್ತ 88 ರನ್ ಆಗಿದ್ದ ವೇಳೆ ಸಾಯಿ ಸುದರ್ಶನ್ (39) ಔಟಾದರು. ಇದರ ಬೆನ್ನಲ್ಲೇ ಶುಭ್ಮನ್ ಗಿಲ್ (13) ಕೂಡ ವಿಕೆಟ್ ಒಪ್ಪಿಸಿದರು.
ಆ ನಂತರದ ಜೊತೆಗೂಡಿದ ಕೆಎಲ್ ರಾಹುಲ್ (58) ಹಾಗೂ ಧ್ರುವ್ ಜುರೆಲ್ (6) 35.1 ಓವರ್ಗಳಲ್ಲಿ ತಂಡವನ್ನು 124 ರನ್ಗಳ ಗುರಿ ತಲುಪಿಸುವ ಮೂಲಕ ಭಾರತ ತಂಡಕ್ಕೆ 7 ವಿಕೆಟ್ಗಳ ಜಯ ತಂದುಕೊಟ್ಟರು. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ ಎರಡು ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ.