ನವದೆಹಲಿ: ಭಾರತವು ಈಗ ಜಪಾನ್ ದೇಶವನ್ನು ಹಿಂದಿಕ್ಕಿ ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ (Indian Economy) ಹೊರಹೊಮ್ಮಿದೆ ಎಂದು ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಶನಿವಾರ ನಡೆದ ನೀತಿ ಆಯೋಗದ 10ನೇ ಆಡಳಿತ ಮಂಡಳಿಯ ಸಭೆಯ ಬಳಿಕ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಸುಬ್ರಹ್ಮಣ್ಯಂ, ಒಟ್ಟಾರೆ ಭೌಗೋಳಿಕ ರಾಜಕೀಯ ಮತ್ತು ಆರ್ಥಿಕ ಪರಿಸರವು ಭಾರತಕ್ಕೆ ಅನುಕೂಲಕರವಾಗಿಯೇ ಇದೆ ಎಂದಿದ್ದಾರೆ.
“ಈಗ ನಾವು ವಿಶ್ವದಲ್ಲೇ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದ್ದೇವೆ. ನಮ್ಮ ದೇಶದ ಆರ್ಥಿಕತೆಯು 4 ಲಕ್ಷ ಕೋಟಿ ಡಾಲರ್‌ಗೆ ತಲುಪಿದೆ” ಎಂದು ಅವರು ಘೋಷಿಸಿದ್ದಾರೆ.
ಇದನ್ನೂ ಓದಿ: ಗ್ರಾಪಂ ಉಪ ಚುನಾವಣೆಗೆ ದಿನಾಂಕ ಘೋಷಣೆ!
ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಯ ದತ್ತಾಂಶಗಳನ್ನು ಮುಂದಿಟ್ಟು ಮಾತನಾಡಿದ ಅವರು, ಇಂದು ಭಾರತವು ಜಪಾನ್‌ಗಿಂತಲೂ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಈಗ ಭಾರತಕ್ಕಿಂತ ದೊಡ್ಡ ಆರ್ಥಿಕತೆಗಳೆಂದರೆ ಅಮೆರಿಕ, ಚೀನಾ ಮತ್ತು ಜರ್ಮನಿ ಮಾತ್ರ. ಈಗ ನಾವು ಏನೇನು ಯೋಜಿಸಿದ್ದೇವೋ ಅವುಗಳನ್ನು ಅನುಷ್ಠಾನಗೊಳಿಸುತ್ತಾ ಸಾಗಿದರೆ, ಮುಂದಿನ ಎರಡೂವರೆಯಿಂದ ಮೂರು ವರ್ಷಗಳಲ್ಲೇ ಭಾರತವು ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕತೆಯೆಂಬ ಹಿರಿಮೆಗೆ ಪಾತ್ರವಾಗಲಿದೆ ಎಂದೂ ಸುಬ್ರಹ್ಮಣ್ಯಂ ತಿಳಿಸಿದ್ದಾರೆ.
ಇದನ್ನೂ ಓದಿ: ನೀತಿ ಸಂಹಿತೆ ಉಲ್ಲಂಘನೆ; ಕಾಂಗ್ರೆಸ್ ನಾಯಕರ ವಿರುದ್ಧ ದೂರು!
ಇದೇ ವೇಳೆ, ಆಪಲ್ ಐಫೋನ್ ಗಳನ್ನು ಭಾರತದಲ್ಲಿ ತಯಾರಿಸದಂತೆಯೂ, ಭಾರತದಲ್ಲಿ ತಯಾರಿಸಿದ ಐಫೋನ್ ಗಳನ್ನು ಅಮೆರಿಕದಲ್ಲಿ ಮಾರಾಟ ಮಾಡಬೇಕೆಂದರೆ ಹೆಚ್ಚುವರಿ ಸುಂಕ ತೆರಬೇಕೆಂದೂ ಆಪಲ್ ಕಂಪನಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೀಡಿರುವ ಎಚ್ಚರಿಕೆ ಬಗ್ಗೆಯೂ ಸುದ್ದಿಗಾರರು ಪ್ರಶ್ನೆಗಳನ್ನು ಕೇಳಿದರು. ಇದಕ್ಕೆ ಉತ್ತರಿಸಿದ ಸುಬ್ರಹ್ಮಣ್ಯಂ, ಸುಂಕ ಎಷ್ಟಿರುತ್ತದೆ ಎನ್ನುವುದು ಅನಿಶ್ಚಿತ. ಒಟ್ಟಾರೆಯಾಗಿ ನೋಡಿದರೆ, ಯಾವುದೇ ಉತ್ಪನ್ನಗಳನ್ನು ತಯಾರಿಸಲು ಭಾರತದಷ್ಟು ಅಗ್ಗದ ಜಾಗ ಬೇರೊಂದಿಲ್ಲ ಎಂದರು. ಇದೇ ವೇಳೆ, ಎರಡನೇ ಸುತ್ತಿನ ಆಸ್ತಿ ನಗದೀಕರಣ ಪ್ರಕ್ರಿಯೆಯ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಆಗಸ್ಟ್ ತಿಂಗಳಲ್ಲಿ ಈ ಬಗ್ಗೆ ಘೋಷಿಸಲಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ.



















