ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಅಜೇಯ ಗೆಲುವಿನ ಓಟ ಮುಂದುವರೆಸಿದ ಭಾರತ ತಂಡ, ಸೆಮಿಪೈನಲ್ ನಲ್ಲಿ ದಕ್ಷಿಣ ಕೊರಿಯಾವನ್ನು ಬಗ್ಗು ಬಡಿದು ಫೈನಲ್ ತಲುಪಿದೆ.
ಹರ್ಮನ್ ಪ್ರೀತ್ ಸಿಂಗ್ ನಾಯಕತ್ವದ ಭಾರತ ಹಾಕಿ ತಂಡ ಸೋಮವಾರ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಕೊರಿಯಾ ತಂಡವನ್ನು 4-1 ಗೋಲುಗಳಿಂದ ಮಣಿಸಿ ದಾಖಲೆಯ 5ನೇ ಬಾರಿಗೆ ಫೈನಲ್ ತಲುಪಿದೆ. ಈ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಆಗಿರುವ ಭಾರತ ತಂಡ ಪ್ರಶಸ್ತಿ ಸುತ್ತಿನಲ್ಲಿ ಚೀನಾ ಎದುರು ಸೆಣಸಾಟ ನಡೆಸಲಿದೆ.
ಈ ಪಂದ್ಯಕ್ಕೂ ಮುನ್ನ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಚೀನಾ ತಂಡ, ಪಾಕಿಸ್ತಾನವನ್ನು ಪೆನಾಲ್ಟಿ ಶೂಟೌಟ್ ನಲ್ಲಿ 2-0 ಗೋಲುಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿದೆ. ಭಾರತ ತಂಡವು ಲೀಗ್ ಹಂತದಲ್ಲಿಯೂ ಉತ್ತಮ ಪ್ರದರ್ಶನ ತೋರಿತ್ತು. ಲೀಗ್ ಹಂತದ ಎಲ್ಲಾ 5 ಪಂದ್ಯಗಳನ್ನು ಗೆದ್ದು, ಸೆಮಿಫೈನಲ್ ತಲುಪಿತ್ತು. 6ನೇ ಪಂದ್ಯದಲ್ಲಿಯೂ ಭರ್ಜರಿ ಗೆಲುವು ಸಾಧಿಸಿ ಈಗ ಫೈನಲ್ ಪ್ರವೇಶಿಸಿದೆ.
ದಕ್ಷಿಣ ಕೊರಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಮೊದಲ ಕ್ವಾರ್ಟರ್ ನಿಂದಲೇ ಭಾರತ ಗೋಲು ಗಳಿಸಿ, ಯಶಸ್ಸು ಆರಂಭಿಸಿತ್ತು. ಮೂರನೇ ಕ್ವಾರ್ಟರ್‌ನ ಅಂತ್ಯಕ್ಕೆ 4-1 ಅಂತರದ ಮುನ್ನಡೆ ಸಾಧಿಸಿತ್ತು. ಮೊದಲ ಕ್ವಾರ್ಟರ್ ಮುಗಿಯುವ ಮುನ್ನವೇ ಉತ್ತಮ್ ಸಿಂಗ್ 13ನೇ ನಿಮಿಷದಲ್ಲಿ ಟೀಂ ಇಂಡಿಯಾ ಪರ ಮೊದಲ ಗೋಲು ಗಳಿಸಿ 1-0 ಮುನ್ನಡೆ ತಂದಿದ್ದರು. ಎರಡನೇ ಕ್ವಾರ್ಟರ್ ನಲ್ಲಿ 19ನೇ ನಿಮಿಷದಲ್ಲಿ ನಾಯಕ ಹರ್ಮನ್ ಪ್ರೀತ್ ಪೆನಾಲ್ಟಿ ಕಾರ್ನರ್ ನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದರು.
ಮೂರನೇ ಕ್ವಾರ್ಟರ್ ನ 32ನೇ ನಿಮಿಷದಲ್ಲಿ ಜರ್ಮನ್ ಪ್ರೀತ್ ಸಿಂಗ್ ಗೋಲು ದಾಖಲಿಸಿದರು. ಇತ್ತ ಮೂರನೇ ಕ್ವಾರ್ಟರ್ ನಲ್ಲಿ ಗೋಲುಗಳ ಖಾತೆ ತೆರೆದ ಕೊರಿಯಾ ಪರ ಯಾಂಗ್ ಜಿಹುನ್ 33ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ನಲ್ಲಿ ಗೋಲು ದಾಖಲಿಸಿದರು. ಕೊನೆಯ ನಿಮಿಷದಲ್ಲಿ ಹರ್ಮನ್ ಪ್ರೀತ್ ಮತ್ತೊಮ್ಮೆ ಗೋಲು ಬಾರಿಸುವ ಮೂಲಕ ಗೆಲುವಿನ ರೂವಾರಿಯಾದರು. ಅಂತಿಮವಾಗಿ ಭಾರತ ತಂಡ 4-1 ಗೆಲುವಿನೊಂದಿಗೆ ಕೊರಿಯಾವನ್ನು ಮಣಿಸಿ ಫೈನಲ್ ತಲುಪಿತು.