ಚೀನಾದಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಫೈನಲ್ ನಲ್ಲಿ ಭಾರತ ತಂಡ ಭರ್ಜರಿ ಗೆಲುವು ಸಾಧಿಸುವ ಮೂಲಕ ಏಷ್ಯನ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಆತಿಥೇಯ ಭಾರತ ತಂಡವು 1-0 ಗೋಲುಗಳಿಂದ ಗೆಲುವು ಸಾಧಿಸುವ ಮೂಲಕ ಟ್ರೋಪಿಗೆ ಮುತ್ತಿಕ್ಕಿದೆ. ಈ ಮೂಲಕ ಹರ್ಮನ್ಪ್ರೀತ್ ಸಿಂಗ್ ನಾಯಕತ್ವದ ಭಾರತ ಹಾಕಿ ತಂಡ ದಾಖಲೆಯ 5ನೇ ಬಾರಿಗೆ ಏಷ್ಯನ್ ಚಾಂಪಿಯನ್ಸ್ ಕಿರೀಟಕ್ಕೆ ಭಾಜನವಾಗಿದೆ.
ಈ ಕೂಟದಲ್ಲಿ ಭಾರತ ತಂಡ ಯಾವುದೇ ಸೋಲು ಕಾಣದೆ ಫೈನಲ್ ವರೆಗೂ ಗೆಲುವಿನ ನಾಗಾಲೋಟ ಮುಂದುವರೆಸಿತು. ಆದರೆ, ಪೈನಲ್ ನಲ್ಲಿ ಭಾರತ ತಂಡಕ್ಕೆ ಚೀನಾ ತೀವ್ರ ಪೈಪೋಟಿ ನೀಡಿತು. ಮೊದಲ ಮೂರು ಕ್ವಾರ್ಟರ್ ಗಳಲ್ಲಿ ಯಾವ ತಂಡಕ್ಕೂ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ನಾಲ್ಕನೇ ಕ್ವಾರ್ಟರ್ ನಲ್ಲಿ ಗೋಲು ದಾಖಲಿಸುವಲ್ಲಿ ಯಶಸ್ವಿಯಾದ ಭಾರತ ತನ್ನ ಚಾಂಪಿಯನ್ ಪಟ್ಟವನ್ನು ತನ್ನಲ್ಲಿಯೇ ಉಳಿಸಿಕೊಂಡಿತು.
ಟೂರ್ನಿಯ ಮೊದಲ ಪಂದ್ಯದಲ್ಲಿ ಇದೇ ಚೀನಾ ತಂಡವನ್ನು ಭಾರತ ತಂಡ 3-0 ಗೋಲುಗಳಿಂದ ಸೋಲಿಸಿತ್ತು. ಈ ಟೂರ್ನಿಯಲ್ಲಿ ಭಾರತ ತಂಡ ಫೈನಲ್ ಸೇರಿದಂತೆ ಸತತ 7 ಪಂದ್ಯಗಳನ್ನು ಗೆದ್ದು ಪ್ರಶಸ್ತಿ ಗೆದ್ದಿದೆ. ಟೀಂ ಇಂಡಿಯಾ ಈ ಟೂರ್ನಿಯಲ್ಲಿ ಒಂದೇ ಒಂದು ಪಂದ್ಯವನ್ನು ಸೋತಿಲ್ಲ ಅಥವಾ ಡ್ರಾ ಮಾಡಿಕೊಂಡಿಲ್ಲ. ಆದರೆ, ಫೈನಲ್ ಪಂದ್ಯದಲ್ಲಿ ಗೆಲ್ಲಲು ತೀವ್ರ ಹೋರಾಟ ನಡೆಸಬೇಕಾಯಿತು. ಇಡೀ ಟೂರ್ನಿಯಲ್ಲಿ ಮೊದಲ ಬಾರಿಗೆ ಭಾರತ ತಂಡ ಆರಂಭದಲ್ಲಿ ಗೋಲು ಗಳಿಸಲು ವಿಫಲವಾಯಿತು.
ಫೈನಲ್ ನಲ್ಲಿ ಭಾರತಕ್ಕೆ ಸುಲಭ ಜಯ ಸಿಗುವ ಸಾಧ್ಯತೆಯನ್ನು ನಿರೀಕ್ಷಿಸಲಾಗಿತ್ತು. ಆದರೆ, ಇದಕ್ಕೆ ಅವಕಾಶ ನೀಡದ ಚೀನಾ ಈ ಟೂರ್ನಿಯಲ್ಲಿ ನಿರೀಕ್ಷೆ ಮೀರಿ ಪ್ರದರ್ಶನ ನೀಡಿತು. ಸೆಮಿಫೈನಲ್ ನಲ್ಲಿ ಪೆನಾಲ್ಟಿ ಶೂಟೌಟ್ ನಲ್ಲಿ 2-0 ಗೋಲುಗಳಿಂದ ಪಾಕಿಸ್ತಾನವನ್ನು ಮಣಿಸಿದ್ದ ಚೀನಾ, ಫೈನಲ್ ನಲ್ಲಿಯೂ ಫೈಟ್ ನೀಡಿತು.
ಅಭಿಷೇಕ್ ನೀಡಿದ ಅತ್ಯುತ್ತಮ ಪಾಸ್ ಅನ್ನು ಜುಗ್ರಾಜ್ ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರು. ಪಂದ್ಯದ ಕೊನೆಯ 10 ನಿಮಿಷಗಳಲ್ಲಿ 1-0 ಮುನ್ನಡೆ ಸಾಧಿಸಿದ ಭಾರತ, ಕೊನೆಯವರೆಗೂ ಎದುರಾಳಿ ತಂಡಕ್ಕೆ ಗೋಲು ಬಾರಿಸುವ ಅವಕಾಶ ನೀಡದೆ ಟ್ರೋಫಿ ಎತ್ತಿತು.
ಈ ಮೂಲಕ ಭಾರತ ಐದನೇ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಗೆದ್ದಿದೆ. 2011 ರಲ್ಲಿ ಆರಂಭವಾದ ಈ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ ಮೊದಲ ಆವೃತ್ತಿಯಲ್ಲೇ ಚಾಂಪಿಯನ್ ಆಗಿತ್ತು. ನಂತರ 2016ರಲ್ಲಿಯೂ ಭಾರತ ಪ್ರಶಸ್ತಿ ಗೆದ್ದಿತ್ತು. 2018 ರಲ್ಲಿ ಭಾರತ ಮತ್ತು ಪಾಕಿಸ್ತಾನವನ್ನು ಜಂಟಿ ವಿಜೇತರು ಎಂದು ಘೋಷಿಸಲಾಯಿತು. 2023ಲ್ಲಿ ನಾಲ್ಕನೇ ಬಾರಿಗೆ ಗೆಲುವು ಸಾಧಿಸಿತ್ತು. ಈಗ ಐದನೇ ಪ್ರಶಸ್ತಿ ಗೆದ್ದಿದೆ.